ಶತಮಾನದ ಪುಟ ಸೇರಿತು ಯುನಿರ್ವಸಿಟಿ ಆಫ್ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜ್

ಬೆಂಗಳೂರು: ನಗರದ ಕೆ.ಆರ್ ಸರ್ಕಲ್‍ನಲ್ಲಿರುವ ಯುನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ ಇದೀಗ ಶತಮಾನದ ಸಂಭ್ರಮ. ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯರ ಕನಸಿನ ಕೂಸಾದ ಈ ಕಾಲೇಜು ಇತಿಹಾಸದ ಪುಟಗಳಿಗೆ ಸಾಕ್ಷಿಯಾಗಿದೆ.

ಕುದುರೆ ಲಾಯವಾಗಿದ್ದ ಈ ಜಾಗದಲ್ಲಿ ಬ್ರಿಟೀಷರು ಪಿಡಬ್ಲ್ಯೂಡಿ ಇಲಾಖೆಗಾಗಿ ಕಟ್ಟಡ ನಿರ್ಮಾಣ ಮಾಡಿದ್ದರು. ಇದರ ಸದುಪಯೋಗಪಡಿಸಿಕೊಂಡ ಸರ್‍ಎಂವಿ ಅವರು 1917ರಲ್ಲಿ ಎಂಜಿನಿಯರಿಂಗ್ ಕಾಲೇಜನ್ನು ಪ್ರಾರಂಭಿಸಿದರು. 1913ರಲ್ಲಿ ಕಾಲೇಜು ಸ್ಥಾಪನೆಯಾಗಿದ್ದರೂ ಅಧಿಕೃತವಾಗಿ ಕಾಲೇಜು ಸ್ಥಾಪನೆಯಾಗಿದ್ದು 1917ರಲ್ಲಿ. ಹೀಗೆ ಹೆಮ್ಮರವಾಗಿ ಬೆಳೆದ ಈ ಕಾಲೇಜು ಇಂದು ಸಾವಿರಾರು ಎಂಜಿನಿಯರ್‍ಗಳನ್ನು ದೇಶಕ್ಕೆ ಕಾಣಿಕೆಯಾಗಿ ನೀಡಿದೆ.

1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆ ನಂತರ ಈ ಕಾಲೇಜನ್ನು ವಿವಿಯ ಅಧೀನಕ್ಕೆ ಸೇರಿಸಲಾಯಿತು. ಯುನಿರ್ವಸಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಗಿದ್ದ ಕಾಲೇಜಿಗೆ ಸರ್‍ಎಂವಿ ಅವರ ಸವಿ ನೆನಪಿಗಾಗಿ ಯುನಿರ್ವಸಿಟಿ ವಿಶೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂದು ಹೆಸರಿಡಲಾಯಿತು.

ಎರಡು ಕೋರ್ಸ್‍ಗಳಲ್ಲಿ ಪ್ರಾರಂಭವಾದ ಯುವಿಸಿಇ ಇಂದು 34 ಕೋರ್ಸ್‍ಗಳನ್ನು ಹೊಂದಿದೆ. ಸುಮಾರು 50 ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಇದುವರೆಗೆ 29 ಪ್ರಾಂಶುಪಾಲರನ್ನು ಈ ವಿವಿ ಕಂಡಿದೆ. ನಟ ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ಮನೋಮೂರ್ತಿ, ವಿಜಯಭಾಸ್ಕರ್, ಖ್ಯಾತ ಎಂಜಿನಿಯರ್‍ಗಳಾದ ರೊದ್ದಂ ನರಸಿಂಹ, ಆರ್.ನಟರಾಜನ್, ವಿ.ಕೆ. ಆತ್ರೆ, ಎಂ.ಆರ್ ಶ್ರೀನಿವಾಸನ್ ಸೇರಿದಂತೆ ನೂರಾರು ಮಹಾನ್ ವ್ಯಕ್ತಿಗಳನ್ನು ಈ ಕಾಲೇಜು ಹುಟ್ಟಿ ಹಾಕಿದೆ.

ಶತಮಾನದ ಸಂಭ್ರಮದಲ್ಲಿರುವ ಕಾಲೇಜಿನ ಇತಿಹಾಸದ ಕ್ಷಣಗಳನ್ನು ಮರುಕಳಿಸುವ ಆಸಕ್ತಿ ಸರ್ಕಾರ ಹಾಗೂ ವಿಶ್ವವಿದ್ಯಾಲಯಕ್ಕೆ ಇದ್ದಂತಿಲ್ಲ. 25 ವರ್ಷಗಳಿಂದ ಇದನ್ನು ಸಂರಕ್ಷಿಸುವ ಕೆಲಸ ಮಾಡಿಲ್ಲ. ವಿಶ್ವೇಶ್ವರಯ್ಯ ಅವರ ಕನಸಿನ ಕೂಸಾದ ಈ ಕಾಲೇಜು ರಾಜ್ಯದ ಕೀರ್ತಿಯನ್ನು ವಿಶ್ವದೆಲ್ಲೆಡೆ ಹರಡುತ್ತಿದೆ. ಇಂತಹ ಐತಿಹಾಸಿಕ ಕಾಲೇಜನ್ನು ಉಳಿಸಿ ಬೆಳೆಸುವ ಹೊಣೆ ಸರ್ಕಾರ ಹಾಗೂ ವಿಶ್ವವಿದ್ಯಾಲಯದ ಮೇಲಿದೆ.