ಹೊಸ ರೂಪ ಪಡೆದುಕೊಳ್ಳುತ್ತಿರುವ 100 ವರ್ಷಗಳಷ್ಟು ಹಳೆಯ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಯುವಿಸಿಇ)ಗೆ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯಲು ಸಿದ್ಧತೆ ನಡೆಸಿದೆ.
ಸರ್ ಎಂ.ವಿಶ್ವೇಶ್ವರಯ್ಯ ಅವರಿಂದ 1917 ರಲ್ಲಿ ಸ್ಥಾಪಿತವಾದ ಈ ಎಂಜಿನಿಯರಿಂಗ್ ಕಾಲೇಜಿನ ನವೀಕರಣ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ, ಸ್ವಾಯತ್ತ ವಿಶ್ವವಿದ್ಯಾಲಯದ (ಡೀಮ್ಡ್) ಸ್ಥಾನಮಾನ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಲ್ಲದೆ, ಕಾಲೇಜಿಗೆ ಅನುಮೋದಿತ 177 ಬೋಧಕ ಹುದ್ದೆಗಳ ಪೈಕಿ 93 ಹುದ್ದೆಗಳು ಭರ್ತಿ ಆಗಿಲ್ಲ. ಈ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಲಾಗುವುದು. ಬಳಿಕ ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಷನ್ ಮತ್ತು ನ್ಯಾಕ್‌ನಿಂದ ಮಾನ್ಯತೆ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.
ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ಹೊಂದಲು ಎಲ್ಲ ಅರ್ಹತೆಯನ್ನೂ ಹೊಂದಿದೆ. ಯುವಿಸಿಇ ಪ್ರಸ್ತುತ 15 ಎಕರೆ ಜಾಗ ಹೊಂದಿದ್ದು, 3000 ವಿದ್ಯಾರ್ಥಿಗಳು ಇದ್ದಾರೆ. ಮೆಕ್ಯಾನಿಕಲ್ ಬ್ಲಾಕ್ ಅನ್ನು ನವೀಕರಿಸುವುದರ ಜತೆಗೆ ಅದರ ಪಕ್ಕದಲ್ಲೇ ₹55 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸ್ತಾವನೆ ಈಗಾಗಲೇ ಸಿದ್ಧಪಡಿಸಲಾಗಿದೆ ಎಂದರು.
ಸುಮಾರು ₹25 ಕೋಟಿ ವೆಚ್ಚದಲ್ಲಿ ಯುವಿಸಿಇಯ ಪ್ರಧಾನ ಕಟ್ಟಡದ ನವೀಕರಣ ಈಗಾಗಲೇ ಭರದಿಂದ ಸಾಗಿದೆ. ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಕಟ್ಟಡದ ಪಾರಂಪರಿಕ ರಚನೆಗೆ ಧಕ್ಕೆ ಆಗದಂತೆ, ಪ್ರತಿ ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ನವೀಕರಣ ನಡೆಸಲಾಗುತ್ತಿದೆ. ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿತ್ತು. ಅದಕ್ಕೆ ಗಟ್ಟಿ ಮುಟ್ಟಾದ ತುಕ್ಕು ನಿರೋಧಕ ಲೇಪನ ಹೊಂದಿರುವ ಕಬ್ಬಿಣದ ತೊಲೆಗಳನ್ನು ಅಳವಡಿಸಲಾಗಿದೆ ಎಂದರು.
ರಸ್ತೆಯಲ್ಲಿ ಓಡಾಡುವ ವಾಹನಗಳ ಸದ್ದಿನಿಂದ ತರಗತಿ ಒಳಗೆ ಪಾಠ ಕೇಳುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಪ್ರತಿಯೊಂದು ತರಗತಿಯ ಕೊಠಡಿಗಳ ಕಿಟಕಿಗಳಿಗೆ ಮೂರು ಪದರದ ಗಾಜುಗಳನ್ನು ಅಳವಡಿಸುವ ಮೂಲಕ ‘ಸೌಂಡ್ ಪ್ರೂಫ್’ ಮಾಡಲಾಗುತ್ತಿದೆ. ಇದರಿಂದ ಹೊರಗಿನ ಸದ್ದು ವಿದ್ಯಾರ್ಥಿಗಳಿಗೆ ಕೇಳುವುದಿಲ್ಲ ಎಂದು ಅವರು ವಿವರಿಸಿದರು.
ಸ್ಕೈವಾಕ್ ಮತ್ತು ಹಾಸ್ಟೆಲ್
ಮುಖ್ಯ ಕಟ್ಟಡದಿಂದ ಮೆಕ್ಯಾನಿಕಲ್ ಬ್ಲಾಕ್‌ಗೆ ವಿದ್ಯಾರ್ಥಿಗಳು ಓಡಾಡಲು ಸ್ಕೈವಾಕ್ ನಿರ್ಮಿಸಲಾಗುವುದು. ಎರಡು ಕಟ್ಟಡಗಳ ಮಧ್ಯೆ ವಾಹನ ದಟ್ಟಣೆಯಿಂದ ಕೂಡಿದ ರಸ್ತೆ ಇರುವುದರಿಂದ ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲವಾಗಲು ಸ್ಕೈವಾಕ್ ಅಗತ್ಯವಿದೆ ಎಂದು ಅವರು ಹೇಳಿದರು.
ಅಲ್ಲದೇ, ಸರ್ಕಾರಿ ಕಲಾ ಕಾಲೇಜಿಗೆ ಹೊಂದಿಕೊಂಡಂತೆ ಯುವಿಸಿಇ ಸೇರಿದ ಜಾಗದಲ್ಲಿ 1500 ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್ ಅನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿ ನಿರ್ಮಿಸಿಕೊಡಲಿದೆ. ಜ್ಞಾನಭಾರತಿ ಕ್ಯಾಂಪಸ್ ಬಳಿ ಮೆಟ್ರೊ ನಿಲ್ದಾಣ ಸ್ಥಾಪನೆ ಆಗಲಿದ್ದು, ಇದರಿಂದ ಯುವಿಸಿಇಯಿಂದ ಜ್ಞಾನಭಾರತಿ ಕ್ಯಾಂಪಸ್‌ಗೆ ವಿದ್ಯಾರ್ಥಿಗಳು 10 ರಿಂದ 20 ನಿಮಿಷಗಳಲ್ಲಿ ತಲುಪಲು ಸಾಧ್ಯ ಎಂದು ವೇಣುಗೋಪಾಲ್ ತಿಳಿಸಿದರು.
ವೈಮಾನಿಕ ಮತ್ತು ಬಾಹ್ಯಾಕಾಶ ತಂತ್ರಜ್ಞಾನ
ಯುವಿಸಿಇಯಲ್ಲಿ ವೈಮಾನಿಕ ಮತ್ತು ಬಾಹ್ಯಾಕಾಶ ವಿಜ್ಞಾನದ ಕೋರ್ಸ್‌ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪ್ರೊ.ವೇಣುಗೋಪಾಲ್ ಹೇಳಿದರು.
ಈ ಕೋರ್ಸ್‌ಗಳನ್ನು ಆರಂಭಿಸಲು ಇಸ್ರೆಲ್ ಅತಿ ಕಡಿಮೆ ಬಡ್ಡಿ ದರದಲ್ಲಿ ₹300 ಕೋಟಿ ಸಾಲ ನೀಡಲು ಸಿದ್ಧವಿದೆ. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗ ನೀಡಲಿದೆ. ಇದಕ್ಕಾಗಿ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ 50 ಎಕರೆ ಭೂಮಿ ನೀಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಭಾರತ ವೈಮಾನಿಕ ಮತ್ತು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಇದಕ್ಕೆ ಪೂರಕವಾಗಿ ತಂತ್ರಜ್ಞಾನ ಹಿನ್ನಲೆಯುಳ್ಳ ಮಾನವ ಸಂಪನ್ಮೂಲವನ್ನೂ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಗಂಡ ಬೇರುಂಡ
ಯುವಿಸಿಇಯಲ್ಲಿರುವ ‘ಗಂಡ ಬೇರುಂಡ’ ಲಾಂಛನ ಹಿಂದೆ ಗಾರೆಯಲ್ಲಿ ತಯಾರಿಸಲಾಗಿತ್ತು. ಅದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಅದನ್ನು ಮರುರೂಪಿಸಲಾಗುವುದು. ಗಂಡಬೇರುಂಡ ತಯಾರಿಸಬಲ್ಲ ಕುಶಲಕರ್ಮಿಗಳನ್ನು ತಂಜಾವೂರಿನಿಂದ ಕರೆಸಲಾಗುವುದು ಎಂದು ನಿರ್ಮಾಣ ಕಾರ್ಯದ ಮುಖ್ಯ ಎಂಜಿನಿಯರ್ ತಿಳಿಸಿದರು.