ಸಂಪದದ ಹತ್ತನೆಯ ವಾರ್ಷಿಕೋತ್ಸವಕ್ಕೆ ಹಳೆಯ ಸಂಪುಟಗಳಿಂದ ಆಯ್ದ – ವಿಶೇಷ ಸಂದರ್ಶನಗಳು – ಕೃಷ್ಣಪ್ರಸಾದ್ ಕೆ ವಿ ಮೆಲುಕುಗಳು – 2009 ಬ್ಯಾಚ್ ಸಿವಿಲ್

ಸಂಪದ ತಂಡ: ಸಂಗೀತದ ಕುರಿತು ನಿಮಗೆ ಒಲವು ಮೂಡಲು ಕಾರಣವೇನು? ಅದು ಹೇಗೆ ಪ್ರಾರಂಭವಾಯ್ತು?

ಕೃಷ್ಣಪ್ರಸಾದ್: ನೀವು ಹೇಳಿರೋ ಹಾಗೆ ನಮ್ಮ ಮನೆಯಲ್ಲೇನು ಸಂಗೀತದ ಹಿನ್ನಲೆಯಲ್ಲಿ ಬಂದಂತಹ ಹಿರಿಯರು ಇರಲಿಲ್ಲ, ಆದರೆ ನಮ್ಮ ತಂದೆ-ತಾಯಿ ಸುಮಧುರವಾಗಿ ಹಾಡುತ್ತಿದ್ದರು ಹಾಗೂ ಅವರಿಗೆ ಕ್ಲಾಸಿಕಲ್/ಶಾಸ್ತ್ರೀಯ ಸಂಗೀತದಡೆಗೆ ಅಪಾರವಾದ ಒಲವಿತ್ತು. ಇವುಗಳ ನಡುವೆ ನನಗೆ ಪುಷ್ಟಿ ನೀಡಿದ ವಿಚಾರವೆಂದರೆ ನಮ್ಮ ಮನೆಯಲ್ಲಿನ ವಾತಾವರಣ ಹಾಗೂ ನಮ್ಮ ತಂದೆಯವರು ಆಯೋಜಿಸುತ್ತಿದ್ದ ಕಾರ್ಯಕ್ರಮಗಳು ಇವೆಲ್ಲವೂ ಸಣ್ಣ ವಯಸ್ಸಿನಿಂದಲೂ ನನಗೆ ಸಂಗೀತದ ಲೋಕದೆಡೆಗೆ ಕೈಬೀಸಿ ಕರೆದಿತ್ತು. ಆದರೇ ಸಂಗೀತ ಲೋಕಕ್ಕೆ ನನ್ನ ಪರಿಚಯಿಸಿದವರು ನನ್ನ ಗುರುಗಳಾದ ವಿದ್ವಾನ್ ಆರ್. ಕೆ. ಪದ್ಮನಾಭರವರು. ಹತ್ತೊಂಬತ್ತರ ವಯಸ್ಸಿನವರೆಗೂ ಸಂಗೀತದಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ ನನಗೆ ಆ ಸಮಯದಲ್ಲಿ ನಮ್ಮ ಗುರುಗಳು ಒಂದು ಸಂಗೀತ ಕಾರ್ಯಾಗಾರವನ್ನು ಏರ್ಪಾಡು ಮಾಡಿದರು (ವಾದಿರಾಜ ಕಲಾಭವನ) ಅದು ನನ್ನ ಸಂಗೀತ ಪಯಣಕ್ಕೆ ಹೊಸದಾದ ದಿಕ್ಕನೇ ಸೃಷ್ಟಿ ಮಾಡಿತು. ಕ್ಲಾಸಿಕಲ್/ಶಾಸ್ತ್ರೀಯ ಸಂಗೀತ ಕೇವಲ ಒಂದು ಮನೋರಂಜನೆಯ ಭಾಗ ಎಂದು ತಿಳಿದಿದ್ದ ನಾನು, ಆ ಕಾರ್ಯಾಗಾರದಲ್ಲಿ ಆ ಸಂಗೀತದ ಮಹತ್ವವನ್ನು ಅರಿತೆ, ಸಂಗೀತ ಎನ್ನುವುದು ಮನೋರಂಜನೆಗೆ ಸೀಮಿತವಾಗದೆ ದೇಹದ ಆರೋಗ್ಯಕ್ಕೆ, ಮನಸ್ಸಿನ ಆರೋಗ್ಯಕ್ಕೆ, ವಿದ್ಯಾರ್ಜನೆಗೆ, ಸ್ಮರಣಾ ಶಕ್ತಿಗೆ ಹಾಗೂ ಸಮಾಜಕ್ಕೆ ಎಷ್ಟು ಉಪಯುಕ್ತ ಎನ್ನುವುದನ್ನು ತಿಳಿಸಿಕೊಟ್ಟಿತು, ಅಂದಿನಿಂದ ನಾನು ಸಂಗೀತದ ಉನ್ನತ ಉದ್ದೇಶವನ್ನು ಅನುಭವಿಸಿದೆ, ಪ್ರಾಯಶಃ ಇದು ನನ್ನ ಬದುಕನ್ನು ಬದಲಾಯಿಸಿದ ಘಟನೆಯೆಂದರೆ ತಪ್ಪಾಗಲಾರದು. ಕಾಲಕ್ರಮೇಣದಲ್ಲಾದ ಇಷ್ಟೆಲ್ಲಾ ಬದಲಾವಣೆಗಳು ಯಾರೋ ಒತ್ತಾಯ ಮಾಡಿ ಕಳುಹಿಸಿದ ಕಾರ್ಯಾಗಾರದಿಂದ ಎಂದರೆ ನನಗೂ ಅಚ್ಚರಿ ಉಂಟುಮಾಡುವ ವಿಚಾರ. ಇಂದು ಸಂಗೀತ ನನ್ನ ಉಸಿರಾಗಿದೆ.

ಸಂಪದ ತಂಡ: ಸಂಗೀತ ಕ್ಷೇತ್ರದಲ್ಲಿ ಯಾವ ರೀತಿಯ ಸಾಧನೆ ಮಾಡಬೇಕೆಂದು ಆಶಿಸುತ್ತೀರಿ?

ಕೃಷ್ಣಪ್ರಸಾದ್: ಯಾವುದೇ ಕಲಾ ಪ್ರಕಾರಕ್ಕೆ ಕೊನೆಯೆನ್ನುವುದೇ ಇಲ್ಲ..! ಶಾಸ್ತ್ರೀಯ ಸಂಗೀತದ ವಿಚಾರಕ್ಕೆ ಬಂದರೆ ಅದು ಆಳವನ್ನೇ ಅರಿಯದ ಸಾಗರ. ನಮ್ಮ ಉದ್ದೇಶ ಇರುವುದು ಶಾಸ್ತ್ರೀಯ ಸಂಗೀತವು ಹೇಗೆ ಓರ್ವ ವಿದ್ಯಾರ್ಥಿಯ ಜೀವನದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರುತ್ತವೆ ಎನ್ನುವ ಬಗ್ಗೆ ಅಧ್ಯಯನ ಮಾಡಬೇಕು ಎನ್ನುವಂತದ್ದು ಹಾಗೂ Musical nodesಗಳು ಹೇಗೆ ಮಾನವನ ಭಾವನೆಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ದಿಟವಾಗಿ ತಿಳಿಸಬೇಕು ಎನ್ನುವಂತದ್ದು. ಇವುಗಳ ಬಗ್ಗೆ ಒಂದಿಷ್ಟು ವಿಚಾರವನ್ನು ಹೇಳಬೇಕಾದರೆ, ಶಾಸ್ತ್ರೀಯ ಸಂಗೀತದ ಬಗ್ಗೆ ಜನರಲ್ಲಿ ಒಂದು ತಪ್ಪು ಕಲ್ಪನೆಯಿದೆ ಅದು ಈ ರೀತಿಯ ಸಂಗೀತ ಕೇವಲ ವಯಸ್ಸಾದವರಿಗೆಅಂತ. ಆದರೆ ನಿಮಗಚ್ಚರಿ ಮೂಡಿಸುವ ವಿಚಾರ ಹೇಳ್ತೀನಿ, ಶಾಸ್ತ್ರೀಯ ಸಂಗೀತವನ್ನು ಹೆಚ್ಚಾಗಿ ಕೇಳುತ್ತಿರುವವರೆ ಯುವಕರು, ಯಾವುದೇ ಊರಾಗಲಿ, ಯಾವುದೇ ಕ್ಷೇತ್ರದಲ್ಲಾಗಲಿ, ಯಾವ ಕಾರ್ಯಕ್ರಮವಾಗಲೀ  ಶಾಸ್ತ್ರೀಯ ಸಂಗೀತ ಆಲಿಸುವವರ Ratio ಸ್ವಲ್ಪ ಹೆಚ್ಚಾಗಿದೆ. ಇದು ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಕೂಡ ಈ ಅಭ್ಯಾಸವೇ ಇದೆ, ನಾನು ಇದನ್ನು ಕಣ್ಣಾರೆ ಕಂಡಿರುತ್ತೇನೆ…! ಬೇರೆ ಕಲಾಪ್ರಕಾರವರೂ ಕೂಡ ನಮ್ಮ ಶಾಸ್ತ್ರೀಯ ಸಂಗೀತದೆಡೆಗೆ ಹೆಚ್ಚು ಒಲವನ್ನು ತೋರುತಿದ್ದಾರೆ ಯಾಕೆ ? ಹೀಗೆ ಹುಡುಕಹೊರಟಾಗ ನಾನು ಈ ವಿಷಯವನ್ನು ಅರಿತೆ.

ನಮ್ಮ ಕಲಾ ಪ್ರಕಾರದಲ್ಲಿರುವ Frequency, tunes ಇದು ನಮ್ಮ ಮಿದುಳಿನ ಮೇಲೆ ಸಾಕಷ್ಟು Positive impactಅನ್ನು ಹೊಂದಿರುತ್ತದೆ. ಅದು ಹೇಗೆ? ನಮ್ಮಲ್ಲಿ ಶ್ರುತಿಯನ್ನು ಆಲಿಸಲು ತಂಬೂರಿಯನ್ನು ಇರಿಸಿಕೊಂಡಿರುತ್ತೀವಿ, ಈ ತಂಬೂರಿಯ ನಾದವೇ ಸಾಕು ನಮ್ಮ ದುಗುಡನ್ನು ತಣಿಸೋಕೆ. ವಿದ್ಯಾರ್ಥಿಗಳು ಎದುರಿಸುವ Depression ಹಾಗೂ ಹಲವು ಮಾನಸಿಕ ಸಮಸ್ಯೆಗಳನ್ನು ತಣಿಸುವ ಶಕ್ತಿ ನಮ್ಮ ನಾದಗಳಿಗೆ ಇರುತ್ತದೆ. ನಮ್ಮ ಶಾಲೆಯಲ್ಲೇ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯನ್ನು ಕೊಡಬಹುದು, ಓದಿನಬಗ್ಗೆ ಜಿಗುಪ್ಸೆ ಹುಟ್ಟಿ, ಶಾಲೆಯನ್ನೇ ಬಿಟ್ಟಿಬಿಡುವೆನು ಎನ್ನುತ್ತಿದ್ದ ವಿದ್ಯಾರ್ಥಿಯ ಮೇಲೆ ನಾವು ಒಂದು ಪುಟ್ಟ ಪ್ರಯೋಗವನ್ನು ಮಾಡಿದೆವು. ಅವರಿಗೆ ಶಾಸ್ತ್ರೀಯ ಸಂಗೀತವನ್ನು ಪ್ರತಿ ದಿನ ಕನಿಷ್ಠ 30 ನಿಮಿಷಗಳ ವರೆಗೆ ಕೇಳಿಸಿದವು, ಈ ಪರಿಪಾಠವು 30 ದಿನಗಳವರೆಗೆ ಮುಂದುವರಿಸಿದೆವು. ಆ ವೀಣೆಯ ನಾದ, ಸಂಗೀತದ ಮದ ಅವರ ಕಿವಿಯಮೇಲೆ ಬಿದ್ದು ಅವರಿಗೇ ಅರಿವಿಲ್ಲದಂತೆ ತರಗತಿಯಲ್ಲಿ ತಲ್ಲೀನರಾಗುವಂತೆ ಮಾಡಿತು. ಹೀಗೆ ಒಂದು ವರ್ಷದ ಸತತ ಪ್ರಯತ್ನದಿಂದ ಒಂದೂ ಅಂಕವನ್ನು ಪಡೆಯದ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ನಾವು ರಾತ್ರೋರಾತ್ರಿ ಈ ಬೆಳವಣಿಗೆ ಆಗಿಬಿಡುತ್ತದೆ ಅನ್ನುವುದನ್ನ ಪ್ರತಿಪಾಡಿಸುವುದಿಲ್ಲ, ಕಾಲಕ್ರಮೇಣ ಇದರಿಂದ ಉತ್ತಮ ಬದಲಾವಣೆಯಾಗುವುದೊಂತು ನಿಜವಾದ ಸಂಗತಿ. 

ನಾನು ಓರ್ವ ಸಂಗೀತಗಾರನಾಗಿ ಹೇಳಬೇಕೆಂದರೆ, ಒಂದು ಹಾಡು ಹಾಡುವಾಗ ಹತ್ತು ಹಲವು ವಿಚಾರಗಳನ್ನು ಯೋಚಿಸುತ್ತಾ, ಸ್ವರಕ್ಕೆ ತಕ್ಕನಾಗಿ, ತಾಳಕ್ಕೆ ಭದ್ದನಾಗಿ, ಜನರನ್ನು ರಂಜಿಸುತ್ತ ಹಾಡಬೇಕಾಗುತ್ತದೆ. ಹೀಗೆ ನಾನು ವಿವಿಧ ಕಾರ್ಯವನ್ನು ಒಟ್ಟಿಗೇ ಮಾಡಬೇಕಾದರೆ ಓದು, ಬರಹವೆಂಬುದು ಸುಲಭದ ತುತ್ತಾಗುತ್ತದೆ. ಇದಕ್ಕೆ ನಾನೇ ಉದಾಹರಣೆ, ನಾಲ್ಕು ವರ್ಷದ ಅವಧಿಯಲ್ಲಿ ಅತ್ಯಂತ ಕಡಿಮೆ Attendence ಇದ್ದಂತ ವ್ಯಕ್ತಿ ನಾನಾಗಿದ್ದರು, The Best outgoing student ಅಂತ ಗುರುತಿಸಿಕೊಂಡದ್ದು. ಇದಕ್ಕೆ ಮೂಲ ಉದ್ದೇಶ, ಕರ್ನಾಟಿಕ್ music, ಈ ಸಂಗೀತ ಪ್ರಕಾರವೂ Memory power, retention power, focus ಹೆಚ್ಚಿಸುತ್ತದೆ. ಯಾವ ಮಟ್ಟಕ್ಕೆ ಎಂದರೆ 10ಗಂಟೆಗಳ ಓದನ್ನು 5ಗಂಟೆಗಳಿಗೆ ಮುಗಿಸಿಬಿಡಬಹುದಾಗಿದೆ. University of Pennsylvania, University of California, ಅಕ್ಕ ಸಮ್ಮೇಳನ New Jersey ಹೀಗೆ ಎಲ್ಲಾ ಕಡೆಯಲ್ಲೂ, ಸಂಗೀತ ಹಾಗೂ ಇದರಿಂದಾಗುವ ಉಪಯೋಗವನ್ನು ಸಾರುತ್ತ ಬಂದಿರುವೆನು. ನನ್ನ ಪ್ರತಿಪಾದನೆಯನ್ನು ಒಂದು ವಾಕ್ಯದಲ್ಲಿ ಹೇಳಬೇಕೆಂದರೆ – Nobody can reject this art form if given in a right way. 

ಸ್ವರಗಳ ಶಕ್ತಿಯು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ಹೇಳಬೇಕೆಂದರೆ ಕುತೂಹಲ ಇಮ್ಮಡಿಗೊಳ್ಳುತ್ತದೆ. ಯಾವುದೇ ಕಲಾ ಪ್ರಕಾರವಾಗಿರಲೇ, ಕ್ರೀಡೆ, ಅಭಿನಯ, ನಾಟ್ಯ, ಸಿನೆಮಾ ಇವೆಲ್ಲವೂ ಕೂಡ ಸಂಗೀತವಿಲ್ಲದಿದ್ದರೆ ನಗಣ್ಯ . ಆದರೇ ಸಂಗೀತಕ್ಕೆ ಸ್ವಂತವಾಗಿ ಬೇರೂರುವ ಬಲವಿದೆ. ಒಂದು ಸಿನೆಮಾವನ್ನು ಸಂಗೀತವಿಲ್ಲದೆ ನೋಡಿ ತದನಂತರ ಸಂಗೀತವನ್ನು ಜೋಡಿಸಿ ನೋಡಿ ಆಗ ಎದುರಾಗುವ ಅಜಗಜಾಂತರದ ಬದಲಾವಣೆ ನಿಮಗೇ ತಿಳಿದುಬಿಡುತ್ತದೆ. ಇದು ಹೇಗೆ ಸಾಧ್ಯವೆಂದರೇ Every particular frequency have an impact on your emotional quotient. ಇದು ಅದ್ಭುತವಾದ ವಿಜ್ಞಾನ, ಯಾವುದೋ ನಾದಕ್ಕೆ ನಮ್ಮ ಕಣ್ಣುಗಳು ತುಂಬಿ ಬರುತ್ತದೆ, ಮತ್ಯಾವುದೋ ರಾಗಕ್ಕೆ ನಗು ತಾನಾಗಿಗೆ ತುಳುಕು ಹಾಕಿಕೊಳ್ಳುತ್ತದೆ. ಜಗತ್ತಿನಾದ್ಯಂತ ಯಾವುದೇ ಕಲಾ ಪ್ರಕಾರವನ್ನು ಗಣನೆಗೆ ತಗೆದುಕೊಂಡರೆ ಅದಕ್ಕೆ ಭದ್ರ ಬುನಾದಿಯೇ ಭಾರತೀಯ ಸಂಗೀತ. ಇಷ್ಟೆಲ್ಲ ಕಲಾಪ್ರಕಾರಗಳಿಗೆ ತಾಯಿಯಂತಿರುವ ಸಂಗೀತಕ್ಕೆ ಮನಸ್ಸಿನ ಮೇಲೆ ಘಾಡ ಪರಿಣಾಮವನ್ನು ಬೀರುವ ಶಕ್ತಿ ಇದ್ದೇ ಇರುತ್ತದೆ. ಸಣ್ಣ ಉದಾಹರಣೆಗೆ ಓರ್ವ ಯುವಕನಿಗೆ ಕಾರನ್ನು ಚಲಾಯಿಸಲು ಕೊಟ್ಟು ಪಾಶ್ಚಿಮಾತ್ಯ ಸಂಗೀತವನ್ನು ಕೇಳಲು ಹಾಕಿದಾಗ, ಕಾರನ್ನು ಓಡಿಸುವ ರೀತಿ ಹಾಗೂ ನಮ್ಮ ಶಾಸ್ತ್ರೀಯ ಸಂಗೀತವನ್ನು ಕೇಳಿಸುತ್ತಾ ಕಾರನ್ನು ಓಡಿಸುವ ರೀತಿಯಲ್ಲೇ ಬದಲಾವಣೆಗಳನ್ನು ಕಾಣಬಹುದು. ನಮ್ಮ ಸಂಗೀತ ನೀಡುವ ಸಹನೆಯೇ ಅಂತದ್ದು, ಎಂಥವರನ್ನೂ ಶಾಂತವಾಗಿಸುವ ಗುಣ ಶಾಸ್ತ್ರೀಯ ಸಂಗೀತಕ್ಕಿದೆ. Positive attitude, helping nature, social mingling ಹೀಗೆ ಅದ್ಬುತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಸಂಗೀತ ಎನ್ನುವುದು ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಾನು ಅಧ್ಯಯನ ಮಾಡಬೇಕೆಂಬುದು ನನ್ನ ಬಹುಕಾಲದ ಆಸೆ.

ಸಂಪದ ತಂಡ: ನೀವು ನಡೆಸುತ್ತಿರುವ ಸಂಗೀತ ಶಾಲೆಯ ಕುರಿತು ನಮ್ಮ ಓದುಗರಿಗೆ ತಿಳಿಸಿ

ಕೃಷ್ಣಪ್ರಸಾದ್: ನಾನು ಒಂದು ಸಂಗೀತ ಶಾಲೆಯನ್ನು (ಶ್ರೀ ವಿದ್ಯಾ ಕಲಾಕೇಂದ್ರ) ನಡೆಸುತ್ತಿದ್ದೇನೆ. ೨೦೦೮ರಲ್ಲಿ ಆರಂಭವಾದ ಈ ಶಾಲೆಯ ಮೂಲ ಉದ್ದೇಶವೇನೆಂದರೆ ಕೇವಲ ಒಂದು reality show ಅಥವಾ 2 – 3 competition-ಗಳಲ್ಲಿ ಭಾಗವಹಿಸುವುದರ ಮೂಲಕ ಒಂದು superficial level ಅಲ್ಲಿ ವಿದ್ಯಾರ್ಥಿಗಳನ್ನು restrict ಮಾಡದೇ, ಸಂಗೀತದ philosophical value, scientific approach, ಸಂಗೀತದಲ್ಲಿ ಅಡಕವಾಗಿರುವ ಸಾಹಿತ್ಯ, ಅದರ ಮೂಲಕ ಮತ್ತೊಬ್ಬ ಮನುಷ್ಯನ ಮೇಲೆ ಬೀರಬಹುದಾದ ಪ್ರಭಾವ, ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರಿಗೆ ಸಿಗುವಂತಹ ಸಂತೋಷ, ಆನಂದ, ನೆಮ್ಮದಿ, ತೃಪ್ತಿ – ಇವುಗಳ ಬಗ್ಗೆ ತಿಳುವಳಿಕೆ ಮೂಡಿಸುವುದೇ ಆಗಿದೆ.

ನೀವು ನಂಬದೆ ಇರಬಹುದು, ಆದರೆ ಸುಮಾರು 45ಕ್ಕೂ ಹೆಚ್ಚು ಯುವಕ-ಯುವತಿಯರು (ಅದರಲ್ಲಿ ಕೆಲವರು ಡಾಕ್ಟರ್, ವಕೀಲರು, ಸಾಫ್ಟ್ ವೇರ್ ಎಂಜಿನಿಯರ್ ಗಳು) ನಮ್ಮ ಶಾಲೆಯಲ್ಲಿ ಸಂಗೀತ ಕಲಿಯುತ್ತಿರುವುದು ಅಷ್ಟೇ ಅಲ್ಲದೇ, ಅವರು ಕೂಡ performances, ರಿಸರ್ಚ್, paper demonstrations ಮಾಡುತ್ತಾ ಇದ್ದಾರೆ. ನಮ್ಮ ಶಾಲೆಯಲ್ಲಿ ಒಂದು “Music Lab” ಮಾಡಬೇಕೆಂದು ನಮ್ಮ ಆಸೆ. ಇದರಲ್ಲಿ ತಂಬೂರಿಯನ್ನು ಮಾಡುವ ಪ್ರಕ್ರಿಯೆ, ಅದಕ್ಕೆ ಬೇಕಾದ ಪರಿಕರಗಳು, ತಂತಿಗಳ ಬಗ್ಗೆ ಅಧ್ಯಯನ (Sting Theory), ಮತ್ತು ಇವುಗಳ ಕಾರಣದಿಂದ ನಮ್ಮ ಶರೀರದ ಮೇಲಾಗುವ (ಮುಖ್ಯವಾಗಿ ದೇಹದಲ್ಲಿ ರಕ್ತ ಸಂಚಾರ) ಪರಿಣಾಮಗಳು – ಈ ರೀತಿ ಹಲವು ವಿಚಾರಗಳ ಬಗ್ಗೆ ರಿಸರ್ಚ್ ಮಾಡಬೇಕೆಂಬುದು ನಮ್ಮ ಉದ್ದೇಶ ಮತ್ತು ಈ ನಿಟ್ಟಿನಲ್ಲಿ ನಮ್ಮ ಗುರುಗಳಾದ ಆರ್.ಕೆ.ಪ್ರಸಾದ್ ಅವರ  ಮಾರ್ಗದರ್ಶನದಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ.

ಇನ್ನೊಂದು ಶಾಲೆಯನ್ನು (Our School) ಕೂಡ ನಾವು ನಡೆಸುತ್ತಿದ್ದು, ಅದರಲ್ಲಿ ನರ್ಸರಿಯಿಂದ ಹತ್ತನೇ ಕ್ಲಾಸ್-ವರೆಗೂ ನಾವು ತರಗತಿಗಳ ಜತೆಗೆ ಸಂಗೀತವನ್ನು ಕೂಡ ಕಲಿಸುತ್ತಿದ್ದೇವೆ. ವಿವಿಧ ರೀತಿಯ ಕಲಾಪ್ರಕಾರಗಳನ್ನು, ಯೋಗಾಭ್ಯಾಸವನ್ನು ಮತ್ತು ಜೀವನಶಿಕ್ಷಣವನ್ನು ಕೂಡ ಕಲಿಯಲು ಅವಕಾಶ ನೀಡಿದ್ದೇವೆ. ವಿದ್ಯಾರ್ಥಿಗಳೇ ಸ್ವತಃ ಅನೇಕ ಕಾರ್ಯಕ್ರಮಗಳನ್ನು (ಸಂಗೀತ, ಸಾಹಿತ್ಯ, ಸಾಂಸ್ಕೃತಿಕ) ಆಯೋಜಿಸುತ್ತಾರೆ. ನಮಗೆ ನಮ್ಮ ಗುರುಗಳು ಹಾಕಿಕೊಟ್ಟ ದಾರಿಯಲ್ಲೇ, ಒಂದು “ಗುರುಕುಲ”ದ ಮಾದರಿಯ ಶಿಕ್ಷಣ ರೂಪಿಸುವ ಪ್ರಯತ್ನ ನಡೆಯುತ್ತಿದೆ. 

ಇದೆಲ್ಲದರ ಜತೆಗೆ ನನಗೆ ಒಂದು “ಕರ್ನಾಟಕ ಸಂಗೀತ ಅಧ್ಯಯನ ಕೇಂದ್ರ” ಸ್ಥಾಪಿಸುವ ಉದ್ದೇಶ ಇದ್ದು, ಎಲ್ಲಾ ಗುರು -ಹಿರಿಯರ ಆಶೀರ್ವಾದ ಮತ್ತು ಇತರರ ಬೆಂಬಲ-ಪ್ರೋತ್ಸಾಹವೂ ದೊರೆತರೆ ಅದು ಸಾಕಾರಗೊಳ್ಳುವ ವಿಶ್ವಾಸವಿದೆ.

ಸಂಪದ ತಂಡ: ನಿಮ್ಮ ಜೀವನದಲ್ಲಿ ಯು.ವಿ.ಸಿ.ಇ ಯಾವ ರೀತಿಯ ಪ್ರಭಾವ ಬೀರಿದೆ?

ಕೃಷ್ಣಪ್ರಸಾದ್: ಹೆಚ್ಚು-ಕಡಿಮೆ ನಾನು ಸಂಗೀತವನ್ನು ನಾನು ಗಂಭೀರವಾಗಿ ಸ್ವೀಕರಿಸಿದ್ದು, “ಯು.ವಿ.ಸಿ.ಇ”ಯನ್ನು ಸೇರಿದ್ದು ಒಂದೇ ಸಮಯದಲ್ಲಿ. ಕೇವಲ ಈ interview ಗಾಗಿ ನಾನು ಈ ರೀತಿ ಹೇಳ್ತಾ ಇಲ್ಲ, ಆದರೆ ಒಬ್ಬ ಕಲಾವಿದನಿಗೆ ಬೇಕಾಗುವಂತಹ ಅನೇಕ ರೀತಿಯ ಅವಕಾಶಗಳನ್ನು, ಒಂದು ವಾತಾವರಣವನ್ನು ಯು.ವಿ.ಸಿ.ಇ ಕಲ್ಪಿಸಿತು. ಯಾಕೆ ಈ ಮಾತು ಹೇಳ್ತಾ ಇದ್ದೀನಿ ಅಂದರೆ, ಅನೇಕ ಕಾಲೇಜುಗಳಲ್ಲಿ ಕೇವಲ marks, percentage ಮತ್ತು bookish knowledge ಗೆ ಮಾತ್ರ ಆದ್ಯತೆ ನೀಡಿ, ಇನ್ನಿತರ ಪ್ರತಿಭೆಗಳಿರುವ ಒಂದು ವಿದ್ಯಾರ್ಥಿಯನ್ನು ಕಡೆಗಣಿಸುತ್ತಾರೆ. ನಿಜ, marks, rank ಎಲ್ಲಾ ಮುಖ್ಯವಾದುವೇ. ಆದರೆ ಅದೇ ಸರ್ವಸ್ವ ಅಲ್ಲ. ಅದನ್ನು ನಮ್ಮ ಕಾಲೇಜು ಎಂದೂ ಮಾಡಲಿಲ್ಲ. ನಾನು ಇವತ್ತು ಒಬ್ಬ ಸಿವಿಲ್ ಎಂಜಿನಿಯರ್ ಆಗಿದ್ದು ಅನೇಕ projects ಗಳನ್ನು ಕೂಡ ಮಾಡುತ್ತಿದ್ದೇನೆ. ಆದರೆ ಕಾಲೇಜಿನಲ್ಲಿದ್ದಾಗ, ನನ್ನ ಕಲೆಗೆ ಪ್ರೋತ್ಸಾಹ ನೀಡದೇ, ನಿರ್ಬಂಧಗಳನ್ನು ಹೇರಿದ್ದಾರೆ, ನಾನು ಸಂಗೀತವನ್ನು ಇಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದೆನೋ ಇಲ್ಲವೋ.

ನನ್ನ ಹಿರಿಯ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸ್ನೇಹಿತರ ಬೆಂಬಲದಿಂದ, ನಾನು ನನ್ನ music-studies balance  ಮಾಡೋಕೆ ಆಯ್ತು. ಪ್ರತಿ ವರ್ಷ ಕನಿಷ್ಠ 14 – 15 ವಿವಿಧ ಕಾಲೇಜುಗಳ ಫೆಸ್ಟ್ ಗಳಲ್ಲಿ ಭಾಗವಹಿಸುತ್ತಿದ್ದೆ. ಆದ್ದರಿಂದ ನನ್ನ attendance shortage ಎಂಟು ಸೆಮಿಸ್ಟರ್-ಗಳಲ್ಲಿ common ಆಗಿತ್ತು. ಆದರೆ, ಗುರುಗಳ ಆಶೀರ್ವಾದ ಮತ್ತು ಹಿರಿಯರ-ಸ್ನೇಹಿತರ ಹಾರೈಕೆಗಳಿಂದ ಪ್ರತಿ ಸ್ಪರ್ಧೆಯಲ್ಲಿ 1st ಅಥವಾ 2nd prize ಗೆಲ್ಲುತ್ತಿದ್ದೆವು. ಇದು ನನ್ನನ್ನು ಮತ್ತಷ್ಟು ಹುರಿದುಂಬಿಸಲು ಕಾರಣವಾಯಿತು.

ನಾವು ಸಿವಿಲ್ ಆದಕಾರಣ, ಘಾಟಿ ಸುಬ್ರಮಣ್ಯದಲ್ಲಿ ಹದಿನಾಲ್ಕು ದಿನಗಳ ಒಂದು “Survey Tour” ಆಗುತ್ತೆ. ಆ ವರ್ಷ ಅದೇ ಸಮಯದಲ್ಲಿ ಕಾಲೇಜಿನಲ್ಲಿ ಒಂದು “International Conference” ಏರ್ಪಡಿಸಲಾಗಿತ್ತು. ಅದರಲ್ಲಿ ನಾನು “ಸಂಗೀತ ಕಛೇರಿ” ನೀಡಲೇಬೇಕೆಂದು ನನಗೆ special permission ಕೊಡಿಸಿ, ವಿಶೇಷ ವಾಹನ ವ್ಯವಸ್ಥೆ ಮಾಡಿಸಿ, ಎರಡು ತಾಸಿನ ಗಾಯನದ ನಂತರ ಮತ್ತೆ ವಾಪಸ್ ಕಳಿಸಿಕೊಟ್ಟು, ಅಲ್ಲಿ ಕೂಡ ಒಂದು ಸಣ್ಣ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವ ಹಾಗೆ ಮಾಡಿದರು. ಇದು ನಮ್ಮ ಕಾಲೇಜಿನಲ್ಲಿ ಪ್ರತಿಭೆಗಳಿಗೆ ನೀಡುವ ಪ್ರೋತ್ಸಾಹದ ಒಂದು ಉದಾಹರಣೆ. 

ಕಾಲೇಜಿನ ಎಲ್ಲಾ ಗುರುಗಳು ಕೂಡ ನನ್ನ ಬೆಳವಣಿಗೆಗೆ ಕಾರಣೀಕರ್ತರಾಗಿದ್ದು, ಅವರ ಬೆಂಬಲ-ಮಾರ್ಗದರ್ಶನಕ್ಕೆ  ಸದಾ ನಾನು ಚಿರಋಣಿ. ಮುಖ್ಯವಾಗಿ ಎಂ.ಎಸ್. ಅಮರ್ ನಾಥ್ ಸರ್ ಯಾವಾಗಲೂ “ಸಂಗೀತ ಸಾಧನೆ”ಗೆ  ಪ್ರೋತ್ಸಾಹಿಸಿ, ನನಗಾಗಿ special classes ನಡೆಸಿ, ನನಗೆ ಓದಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಅವರನ್ನು ನಾನು ಸದಾ ನೆನೆಯುತ್ತೇನೆ. I am thankful to UVCE and teachers always!!

ಸಂಪದ ತಂಡ: ಯು.ವಿ.ಸಿ.ಇಯಲ್ಲಿ ಕಳೆದ ಕೆಲವು ಸುಂದರ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ 

ಕೃಷ್ಣಪ್ರಸಾದ್: ಬಹಳಷ್ಟು ಮಧುರ ನೆನಪುಗಳಿವೆ. ಅವನ್ನು ಹೇಳುತ್ತಾ ಹೋದರೆ, ಒಂದು ಸಂಚಿಕೆಯೇ ಆಗಬಹುದು. 

ಮೊದಲನೆಯದಾಗಿ, ನಾನು ಕಾಲೇಜ್ ಸೇರಿದ್ದು 2-3 ತಿಂಗಳು ತಡವಾಗಿ. ಆಗ ನಾನು ಸ್ವಲ್ಪ ಗಡ್ಡ ಬೆಳೆಸಿದ್ದೆ.ಮೊದಲ ಸಾರಿ ತರಗತಿಗೆ ಹೋದಾಗ, ಒಂದು leather jacket ಹಾಕಿ ಹೋದಾಗ, ಎಲ್ಲರೂ ನನ್ನ ಯಾರೋ repeater ಅದಕ್ಕೆ ತಡವಾಗಿ ಸೇರಿದ್ದಾನೆ ಅಂತ ಭಾವಿಸಿ ನನ್ನ ಬಳಿ ಮಾತನಾಡಲೇ ಇಲ್ಲ. ಅದೇ ಸಮಯದಲ್ಲಿ ಕಾಲೇಜಿನ ಫೆಸ್ಟ್ ಬಂದು, ಒಂದು ಸಣ್ಣ ತಂಡ ಮಾಡಿಕೊಂಡು 2-3 ದಿನದಲ್ಲಿ ಪ್ರಾಕ್ಟೀಸ್ ಮಾಡಿ “ಹಾಯ್ ರಾಮ ಯೇ ಕ್ಯಾ ಹುವಾ”, “ಏ ಮಿತುವಾ” ಹಾಡನ್ನು ಹಾಡಿದ ನಂತರ ಎಲ್ಲರೂ ಬಂದು “ತುಂಬಾ ಚೆನ್ನಾಗಿ ಹಾಡಿದೆ..ನಾವೆಲ್ಲಾ ನೀನು ಎಂಥವನೋ ಅಂದ್ಕೊಂಡು ಬಿಟ್ಟಿದ್ವಿ” ಅಂತಾ ಹೇಳಿ, ಬಹಳ ಬೇಗ ಆತ್ಮೀಯರಾದರು..  All Thanks to Music !!

ಮತ್ತೊಂದು ಬಹಳ ಆತ್ಮೀಯ ವಿಷಯ ಅಂದ್ರೆ, ಕೆ ಆರ್ ಸರ್ಕಲ್-ನಲ್ಲಿ ಇರುವ main campus ನಲ್ಲಿ ಇದ್ದಂತಹ “Music Room”. ಅದನ್ನು ಮಾತ್ರ ಮರೆಯುವ ಹಾಗೇ ಇಲ್ಲ. ಎಷ್ಟೇ ಕತ್ತಲಾದಾರೂ, 10-12 ಜನ ನಮ್ಮ ಸಂಗೀತ ತಂಡದವರು ಪ್ರಾಕ್ಟಿಸ್ ಮಾಡ್ತಾ ಇದ್ದದ್ದು, ಸೀನಿಯರ್ಸ್ ಜತೆ ಕಲಿತದ್ದು ಎಲ್ಲಾ ಈಗಲೂ fresh ಆಗಿದೆ. ಈಗ ಹೋದರೂ ಕೂಡ ಕ್ಯಾಂಟೀನ್ ಅವ್ರು ಗುರುತು ಹಿಡೀತಾರೆ.

ಬೆಂಗಳೂರು ವಿಶ್ವವಿದ್ಯಾಲಯದ “Music Department”ನಿಂದ ನನಗೆ ಹಾಡಲು ಕರೆಸಿದ ದಿನ ನಮಗೆ Final Exam. ನನಗೆ ವಿಶೇಷ ಅನುಮತಿ ಕೊಡಿಸಿ ಅಲ್ಲಿ ಹೋಗಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟದ್ದು ಒಂದೆಡೆಯಾದರೆ, ಇಂದಿಗೂ ಕೂಡ ಅನೇಕ ಪ್ರೊಫೆಸರ್-ಗಳು, ಹಳೆಯ ವಿದ್ಯಾರ್ಥಿಗಳು ಅವರ ವೈಯಕ್ತಿಕ ಕಾರ್ಯಕ್ರಮಗಳಾಗಿರಲಿ ಅಥವಾ ಇತರ ಸಭೆ-ಸಮಾರಂಭಗಳಿರಲಿ ನನ್ನನ್ನು ಕರೆದು ಸಂಗೀತ ಕಚೇರಿ ನೀಡುವಂತೆ ಕೇಳುವುದು ನನಗೆ ಈಗಲೂ ಹೆಮ್ಮೆಯ ವಿಷಯ.

ಸಂಪದ ತಂಡ: ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕೆಂಬ ಆಕಾಂಕ್ಷೆ ಹೊಂದಿರುವ ಈಗಿನ ವಿದ್ಯಾರ್ಥಿಗಳಿಗೆ ನಿಮ್ಮ ಸಲಹೆ ಏನು?

ಕೃಷ್ಣಪ್ರಸಾದ್: ನಾನು advice ಕೊಡುವಷ್ಟು ಇನ್ನು ಬೆಳೆದಿಲ್ಲ. ಆದರೆ, ನಾನು ನನ್ನ ಗುರುಗಳ ಮತ್ತು ತಂದೆಯವರ ಮಾರ್ಗದರ್ಶನದಂತೆ ನಡೆದು, ನನ್ನ ಅನುಭವದ ಮಾತನ್ನು juniors ಗೆ ಹೇಳಬೇಕು ಅಂದರೆ –

ದಯವಿಟ್ಟು ಸಂಗೀತವನ್ನು career ಆಗಿ ತೆಗೆದುಕೊಳ್ಳಬೇಡಿ. I know its shocking to hear this from me. ಆದರೆ ನಾನು ಹೀಗೆ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ – ಈ passion ಅನ್ನೋದು ಹಾಗೇ ಉಳಿಬೇಕು ಅಂದ್ರೆ ಅದರಿಂದ livelihood ನಡೀಬೇಕು ಅಂತ ಬಯಸಬಾರದು. ನಾವು ಹಾಡುವಾಗ ಅಥವಾ ನರ್ತಿಸುವಾಗ ಅದನ್ನು ನಮ್ಮ ಸಂತೋಷಕ್ಕೆ ಮಾಡಬೇಕೇ ಹೊರತು ಯಾವುದೋ ಆಸೆಗಾಗಿ ಅಲ್ಲ. ಹಣಕ್ಕಾಗಿ ಅಥವಾ ಇನ್ಯಾವುದೋ ಲಾಭಕ್ಕಾಗಿ ನಾವು ನಮ್ಮ passion ಅನ್ನು ಮಾರಿದರೆ, ಅದು ತಪ್ಪು ಅನ್ನುವುದು ನನ್ನ ಅನಿಸಿಕೆ.

ಹಾಗೆಯೇ ಯಾವುದೇ ವಿಷಯವಾಗಲಿ ನಾವು ಅದರಲ್ಲಿ ೨೪ ಘಂಟೆ ಮುಳುಗಿರಬಾರದು. ಸಂಗೀತದಿಂದ ಬೇರೆ ಎಲ್ಲಾ ವಿಷಯಗಳಲ್ಲಿ ಮುಂದಿರುತ್ತಾರೆ ಎಂದು ನಾನು ಮುಂಚೆ ಹೇಳಿದ್ದು ನಿಜವಾಗಿದ್ದಲ್ಲಿ, ನಾವು ಅದನ್ನು prove ಮಾಡಬೇಕೆಂದರೆ, ನಾವು ಇತರ ವಿಷಯಗಳಲ್ಲಿ (ಓದು, ಅಭ್ಯಾಸ, ವೃತ್ತಿ) ತೊಡಗಿಸಿಕೊಂಡು ಅದರಲ್ಲೂ ಸಹ ಉತ್ತಮ ಪ್ರದರ್ಶನ ನೀಡಬೇಕು. ನನ್ನ ಉದಾಹರಣೆಯನ್ನೇ ತೆಗೆದುಕೊಂಡರೆ, ನಾನು ಒಂದು ಸಂಗೀತ ಶಾಲೆ, ಸಾಮಾನ್ಯ ಶಾಲೆ ನಡೆಸುತ್ತಾ, ಸಿವಿಲ್ ಪ್ರಾಜೆಕ್ಟ್ಸ್ ಮಾಡುತ್ತಾ, ಶಾಸ್ತ್ರೀಯ ಸಂಗೀತ ಕಲಿಸುವ 7-8 ಸಂಸ್ಥೆಗಳೊಂದಿಗೆ ನಾನು ಒಡನಾಟ ಇಟ್ಟುಕೊಂಡಿದ್ದೇನೆ. ಹಲವು ಕಾರ್ಯಕ್ರಮಗಳ ನಿಮಿತ್ತ ವಿದೇಶಗಳಿಗೆ ಕೂಡ ಹೋಗುತ್ತೇನೆ. ಇದು ನನ್ನ ಬಗ್ಗೆ ನಾನು ಅಹಂಕಾರದಿಂದ ಹೇಳುತ್ತಿಲ್ಲ. ಆದರೆ ನಿಮ್ಮ ಸಾಮರ್ಥ್ಯವನ್ನು optimal level ಗೆ ಉಪಯೋಗಿಸಿಕೊಳ್ಳಲು ಸಂಗೀತ ಬಹಳ ಉಪಯುಕ್ತ ಎಂದು ತಿಳಿಸಲು ಹೀಗೆ ಹೇಳಿದ್ದು. ಸಂಗೀತವನ್ನು Profession ಆಗಿ ತೆಗೆದುಕೊಳ್ಳುವ ಸ್ಥಿತಿ ಈಗಿನ life-style ನಲ್ಲಿ ಆಗುವುದು ಬಹಳ ಕಷ್ಟಸಾಧ್ಯ. ಆದರೆ ಅದನ್ನು ಆನಂದಿಸಲು, ನಮ್ಮ career ನಲ್ಲಿ ನಾವು ಪ್ರಗತಿ ಹೊಂದಬೇಕು ಮತ್ತು ಅದರ ಮೂಲಕ ಇತರರಿಗೂ ನಾವು ಸಹಾಯ ಮಾಡುವ ಮಟ್ಟಕ್ಕೆ ತಲುಪಬೇಕು ಅನ್ನುವುದು ನನ್ನ ನಂಬಿಕೆ.

ಮತ್ತೊಂದು ವಿಚಾರ ಎಂದರೆ ಈಗಿನ ಕಾಲದಲ್ಲಿ ಎಲ್ಲರೂ ಸಹ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಂಡಿದ್ದು, ನಾನು ಸಂಗೀತ-ಆಧ್ಯಾತ್ಮ ಎಂದು ಹೇಳಿದರೆ ಕಣ್ಣುಮುಚ್ಚಿಕೊಂಡು ಯಾರೂ ಸಹ ನಂಬುವುದಿಲ್ಲ. ಮುಖ್ಯವಾಗಿ ವಿದೇಶಿ ಅಧ್ಯಯನ ಸಂಸ್ಥೆಗಳಲ್ಲಿ ಇದನ್ನು ನಾನು ಅನುಭವ ಮಾಡಿದ್ದು, ಯು.ವಿ.ಸಿ.ಇ ಕಾಲೇಜಿನಲ್ಲಿ ನಾನು ಎಂಜಿನಿಯರಿಂಗ್ ಕಲಿಯುತ್ತಾ reasoning ability ಕೂಡ ಬೆಳೆಸಿಕೊಂಡಿದ್ದು ಇದಕ್ಕೆ ಸಹಕಾರಿಯಾಯ್ತು. Scientific and logical explanation ಗಳನ್ನು ನಾನು ಅವರಿಗೆ convey ಮಾಡಲು ನನ್ನ ಸಂಗೀತದ ಅಧ್ಯಯನದ ಜತೆ educational background ಕೂಡ ಅತ್ಯವಶ್ಯಕ ಎಂದು ನನಗೆ ಮಾನವರಿಕೆಯಾಯ್ತು.

ಸಂಪದ ತಂಡಕ್ಕೆ ನನ್ನ ಅಭಿನಂದನೆಗಳು – ಅವರ ಶ್ರಮಕ್ಕೆ, ಕಾಲೇಜಿನ ಬಗ್ಗೆ ಅವರಿಗಿರುವ ಒಲವು ನಮ್ಮೆಲ್ಲರಿಗೂ ಅನುಕರಣೀಯ. ನಿಮ್ಮೆಲ್ಲ ಯೋಜನೆ-ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಸಹಕಾರ-ಬೆಂಬಲವಿರುತ್ತದೆ ಎಂದು ತಿಳಿಸಲು ಆಶಿಸುತ್ತೇನೆ.

– ಕೃಷ್ಣಪ್ರಸಾದ್ ಕೆ ವಿ, ಸಂಪದ-೧೧೧

Read Online  Download  View All Editions  Feedback/Comments