ಸಂಪದದ ಹತ್ತನೆಯ ವಾರ್ಷಿಕೋತ್ಸವಕ್ಕೆ ಹಳೆಯ ಸಂಪುಟಗಳಿಂದ ಆಯ್ದ – ವಿಶೇಷ ಸಂಪಾದಕೀಯ ಲೇಖನಗಳು – ಯೋಗೇಶ್ ಕೆ ಎಸ್ ನೆನಪಿನ ಬುತ್ತಿಯಿಂದ

ಮತ್ತೊಂದು ಕನ್ನಡ ರಾಜ್ಯೋತ್ಸವ ದಿನಾಚರಣೆಯ ಹೊಸ್ತಿಲಲ್ಲಿ ಈ ಸಂಚಿಕೆಯ ಮೂಲಕ ನಿಮ್ಮನ್ನು ತಲುಪುತ್ತಿರುವುದು ಸಂತಸ ತಂದಿದೆ. ವರ್ಷಗಳಿಂದ ಸುಸಜ್ಜಿತವಲ್ಲದಿದ್ದರೂ ಸಂಘಟಿತ ಕಾರ್ಯವೈಖರಿಯ ಮೂಲಕ ವಿಷನ್ ಯು ವಿ ಸಿ ಇ, ಎಲೆ ಮರೆಯ ಕಾಯಿಯಂತೆ ತನ್ನ ಅಳಿಲು ಸೇವೆಯನ್ನು ನಮ್ಮೆಲ್ಲರ ನೆಚ್ಚಿನ ವಿದ್ಯಾಲಯಕ್ಕೆ ಸಲ್ಲಿಸುತ್ತಿರುವುದು ತಮ್ಮೆಲ್ಲರಿಗೂ ತಿಳಿದ ಸಂಗತಿ. 118 ಸಂಪದ ಸಂಚಿಕೆಗಳನ್ನು ಒಂದು ತಿಂಗಳೂ ತಪ್ಪದೆ ಹೊರತಂದ ಹೆಗ್ಗಳಿಕೆ ಹೊತ್ತ ಈ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ನಮ್ಮ ಹೆಮ್ಮೆಯ ಹೊತ್ತಿಗೆಯಾದ ಸಂಪದ ಇನ್ನೇನು ಎರಡು ಸಂಚಿಕೆಗಳ ದೂರದಲ್ಲಿ ತನ್ನ ಹತ್ತನೇ ವರ್ಷವನ್ನು ಪೂರೈಸಲಿದೆ. ಈ ಮಹತ್ತರ ಸಾಧನೆಯ ಮೈಲುಗಲ್ಲಿಗೆ ಒಕ್ಕೊರಲಿನಿಂದ ಶುಭ ಹಾರೈಸೋಣ.

ಸಂಪದ ಶಬ್ದಕ್ಕೆ ಸಂಪತ್ತು ಎಂಬ ಅರ್ಥವಿದೆ ಅಲ್ಲದೆ ಒಟ್ಟುಗೂಡಿಸುವಿಕೆ ಎಂಬ ಇನ್ನೊಂದರ್ಥವೂ ಇದೆ. ಕಾಲಾನುಕ್ರಮದಲ್ಲಿ ಒಳ್ಳೆಯವನ್ನು ಸಂಸ್ಕರಿಸಿ ಶೇಖರಿಸಿದ್ದನ್ನು ಸಂಪದವೆನ್ನುತ್ತಾರೆ. ಹೀಗೆ ಸಂಸ್ಕರಿಸಿ ಸಂಪಾದಿಸಿದ ಸದ್ವಿಷಯಗಳೇ ಮುಂದೊಮ್ಮೆ ಸಂಸ್ಕೃತಿಯಾಗಿ ಗುರ್ತಿಸಲ್ಪಡುತ್ತದೆ. ಯು ವಿ ಸಿ ಇ ಎಂಬ ಮಹಾಸಂಸ್ಥೆ, ಬರೋಬ್ಬರಿ 100 ವರ್ಷಗಳಿಂದ ವಿಶ್ವವಿಖ್ಯಾತರಾದ ಅಭಿಯಂತರರನ್ನು ಸಂಪಾದಿಸಿ ನಾಡಿಗೆ ಕೊಡುಗೆ ನೀಡುತ್ತಿದೆ. ಇಲ್ಲಿ ಓದುತ್ತಿರುವ ಓದಿದ ಭಾಗ್ಯವಂತರಾದ ನಾವು ವಿದ್ಯೆ ಎನ್ನುವ ಬೃಹತ್ ಶಕ್ತಿಯನ್ನು ಸಂಪಾದಿಸಿ ನಮ್ಮ ಸರ್ವತೋಮುಖ ಬೆಳವಣಿಗೆಯನ್ನು ಸಂಪಾದಿಸುತ್ತಿದ್ದೇವೆ. ವಿಷನ್ ಯುವಿಸಿಇ, ಈ ಪ್ರಕ್ರಿಯೆಯನ್ನು ದಾಖಲಿಸುವ ಸದುದ್ದೇಶದಿಂದ, ಕೇವಲ ದೃಢ ಸಂಕಲ್ಪದ ಆಸರೆಯೊಂದಿಗೆ ಸಂಪದ ಹೊತ್ತಿಗೆಯನ್ನು ಅವಿರತವಾಗಿ ಹೊರತಂದು ಸಂಸ್ಕಾರವೊಂದನ್ನು ಶಾಶ್ವತವಾಗಿ ನೆಲೆಗೊಳಿಸಿದೆ. ಹೀಗೊಂದು ಸಂಸ್ಕೃತಿಯ ಪಾಲುದಾರರಾಗಿರುವುದು ನಮ್ಮ ಭಾಗ್ಯವಿಶೇಷವೇ ಸರಿ.

ಯಾವ ಸಂಸ್ಕೃತಿಯಲ್ಲೇ ಆಗಲಿ ಕುಂದು ಕೊರತೆಗಳಿರುವುದು ಸಹಜ. ನಿರಂತರ ಸಂಸ್ಕರಣವೊಂದೇ ಅವುಗಳನ್ನು ಸರಿಪಡಿಸಲು ಇರುವ ಏಕೈಕ ಮಾರ್ಗ. ಈ ಸಂಸ್ಕರಣವು ಬಾಹ್ಯ ಪ್ರಕ್ರಿಯೆಯಾಗಿ ಮಾತ್ರವಲ್ಲದೆ ಆಂತರಿಕವಾಗಿ ಆದಾಗ ಮಾತ್ರವೇ ಬದಲಾವಣೆ ಮಾಡಲಾಗುತ್ತದೆ. ಹಳೆಯ ವಿದ್ಯಾರ್ಥಿ ಸಂಘಗಳು ಸಾಮಾನ್ಯವಾಗಿ ಕೇವಲ ಹಳೆಯದನ್ನು ಮೆಲುಕು ಹಾಕುವ ಸಂತೋಷ ಕೂಟಗಳಿಗೆ ಮಾತ್ರವೇ ಸೀಮಿತವಾಗಿರುವುದು ಸಾಮಾನ್ಯ ಸಂಗತಿ. ಹೀಗಲ್ಲದೆ, ವಿಷನ್ ಯುವಿಸಿಇ, ಈಗಿನ ಕಾಲೇಜಿನ ಆಗು ಹೋಗುಗಳೊಂದಿಗೆ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ವೈಚಾರಿಕತೆಯನ್ನು, ಉದ್ಯೋಗ ಸಿದ್ಧತೆಗೆ ಬೇಕಾದ ಮಾರ್ಗದರ್ಶನವನ್ನು ಒದಗಿಸಲು ಸಂಘಟನೆಯ ಮೂಲಕ ಅನೇಕ ಸೃಜನಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಷ್ಟು ಪ್ರಬಲ ಬಾಹ್ಯ ಒತ್ತಾಸೆ ಇದ್ದಾಗಿಯೂ ವಿದ್ಯಾರ್ಥಿಗಳು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿಲ್ಲವೆಂಬುದು ಬೇಸರದ ಸಂಗತಿ. ಹಾಗಾಗಿ ಆಂತರಿಕ ಬದಲಾವಣೆಯನ್ನು ತರುವ ಸಲುವಾಗಿ ವಿದ್ಯಾರ್ಥಿಗಳಲ್ಲಿ ಕಳಕಳಿಯಿಂದ ಕೇಳಿಕೊಳ್ಳುವುದಿಷ್ಟೇ – ವಿದ್ಯಾರ್ಥಿ ಜೀವನ ಬಹಳ ಸೀಮಿತ ಅವಧಿ ಆದರೆ ಅದು ಒದಗಿಸುವ ಅವಕಾಶಗಳು ಅಪಾರ. ಈ ಅವಧಿಯಲ್ಲಿ ನಾವು ಅವಕಾಶಗಳನ್ನು ಬಳಸಿಕೊಂಡು ನಮ್ಮನ್ನು ಹೇಗೆ ತೊಡಗಿಸಿಕೊಳ್ಳುತ್ತೇವೆ ಎಂಬುದು ನಮ್ಮ ಮುಂದಿನ ಜೀವನವನ್ನು ನಿರ್ಧರಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ‘ತೂಕಡಿಸಿ ಬೀಳದೆ’ ಸದಾ ಜಾಗೃತರಾಗಿ ಸಾಧ್ಯವಾದದ್ದನ್ನು ಆಸೆಬುರುಕತನದಿಂದ ಮೊಗೆದು ಸಾಧ್ಯವಾದ ಎತ್ತರಕ್ಕೆ ಬೆಳೆಯಿರಿ ಎಂದು ಆಶಿಸುತ್ತೇನೆ.
ನಮ್ಮ ಸಂಸ್ಕೃತಿಯ ಮತ್ತೊಂದು ಅವಿಭಾಜ್ಯ ಅಂಗ ನಮ್ಮ ಭಾಷೆ ‘ಕನ್ನಡ’. ನಮ್ಮ ಕಾಲೇಜಿನಲ್ಲಿ ನನಗೆ ತಿಳಿದ ಮಟ್ಟಿಗೆ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಸಂಭಾಷಣೆ ನಡೆಸುತ್ತಾರೆ. ವಿಜ್ಞಾನದ ಸಂಕೀರ್ಣ ವಿಷಯಗಳನ್ನು ನಮ್ಮ ಭಾಷೆಯ ಸರಳತೆಯ ಸಹಾಯದಿಂದ ಅರ್ಥ ಮಾಡಿಕೊಂಡ ಎಷ್ಟೋ ನೆನಪುಗಳು ಇನ್ನು ನನ್ನಲ್ಲಿ ಹಸಿರಾಗಿದೆ. ಹೀಗೆ ಭಾಷೆಯ ಬಳಕೆಯೊಂದೇ ಅದರ ಜೀವಂತಿಕೆಯನ್ನು ಕಾಪಾಡಬಲ್ಲದು. ಹಾಗಾಗಿ ನೀವು ಕೂಡ ಸಚೇತನರಾಗಿ ಕನ್ನಡ ಭಾಷೆಯ ಬಳಕೆಯನ್ನು ಹೆಚ್ಚಾಗಿಸಿ ಎಂದು ನಿಮ್ಮಲ್ಲಿ ಮನವಿ. ಯಾರಾದರು ಕನ್ನಡ ಬಾರದವರು ನಿಮ್ಮಲ್ಲಿದ್ದರೆ ಅವರನ್ನು ಪ್ರೇರೇಪಿಸಿ, ಅವರಿಗೂ ಭಾಷೆಯನ್ನು ಕಲಿಯಲು ಸಹಾಯ ಮಾಡಿ. ಕನ್ನಡ ಪುಸ್ತಕಗಳನ್ನು ಸಾಧ್ಯವಿದ್ದರೆ ಕೊಂಡು, ಇಲ್ಲದಿದ್ದರೆ ಬೆಂಗಳೂರಿನ ತುಂಬೆಲ್ಲ ಇರುವ ಕೇಂದ್ರ ಗ್ರಂಥಾಲಯಗಳಲ್ಲಿ ಓದಿ. ಓದಿನ ಅನುಭವಗಳನ್ನು ಸ್ನೇಹಿತರೊಡನೆ ಹಂಚಿಕೊಳ್ಳಿ. ಕಾಲೇಜಿನ ಉತ್ಸವಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಈ ಸಣ್ಣ ಪುಟ್ಟ ಸಂಗತಿಗಳು ನಿಮ್ಮಲ್ಲಿ ನವೋಲ್ಲಾಸವನ್ನುಂಟುಮಾಡುವುದರ ಜೊತೆ ಜೊತೆಗೆ ಭಾಷೆಯ ಅಸ್ತಿತ್ವಕ್ಕೆ ಆಸರೆಯಾಗುವುದು.

ಈ ಸಂಚಿಕೆಯಲ್ಲಿ ಅನೇಕ ಕನ್ನಡ ಬಿಡಿ ಲೇಖನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಅಲ್ಲದೆ ‘ಕಾಗದ’ ಕಾರ್ಯಕ್ರಮದ ವಿವರ, ವಿಷನ್ ಯುವಿಸಿಇ ವಿದ್ಯಾರ್ಥಿ ಸಹಾಯಧನ ಕುರಿತಾದ ವಿವರಗಳು, ಶಿಲ್ಪಕಲಾ ವಿಭಾಗದ ‘ಜೋನಸ’ ಉತ್ಸವದ ವಿವರವನ್ನು ವರದಿ ಮಾಡಲಾಗಿದೆ. ಪ್ರಸಿದ್ಧರಾದ ಹಳೆಯ ವಿದ್ಯಾರ್ಥಿ ಪರಿಚಯ ಹಾಗೆಯೇ ಹಳೆಯ ವಿದ್ಯಾರ್ಥಿಗಳ ಸಂದರ್ಶನವನ್ನೂ ಒಳಗೊಂಡಿದೆ. ಯುವಿಸಿಇ ಯಲ್ಲಿ ಕನ್ನಡದ ಸ್ಥಿತಿಗತಿಯ ಕುರಿತು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಂಚಿಕೆಯನ್ನು ನೀವು ಇಷ್ಟಓದುತ್ತೀರೆಂದು ಹಾರೈಸುತ್ತ ವಿವೇಕಾನಂದರ ಚೈತನ್ಯ ವಾಣಿಯೊಂದಿಗೆ ವಿರಮಿಸುತ್ತೇನೆ.

‘ಉತ್ತಿಷ್ಠತ ಜಾಗೃತ ಪ್ರಾಪ್ಯ ವರಾನ್ನಿಬೋಧತ’

ಯೋಗೇಶ ಕೆ ಎಸ್, 2011 ಬಿಇ (ಸಿಎಸ್ಇ)(118 ಸಂಪದದಿಂದ)

Read Online  Download  View All Editions  Feedback/Comments