ಸಂಪದದ ಹತ್ತನೆಯ ವಾರ್ಷಿಕೋತ್ಸವಕ್ಕೆ ಹಳೆಯ ಸಂಪುಟಗಳಿಂದ ಆಯ್ದ – ವಿಶೇಷ ಸಂದರ್ಶನಗಳು – ದತ್ತಣ್ಣನವರ ನೆನಪಿನಂಗಳದಿಂದ – 1963 ಬ್ಯಾಚ್


ಮೆಗಾರಿಯೂನಿಯನ್ ಕಾರ್ಯಕ್ರಮದಲ್ಲಿ ಬಿಳಿಗೂದಲು, ಬಿಳಿಗಡ್ಡ ಇದ್ದು, ಖಾದಿ ಜುಬ್ಬ ತೊಟ್ಟು ಬಹಳಷ್ಟು ಜನ ಬಂದಿದ್ರು. ಆದರೆ, ಒಬ್ಬರನ್ನು ನೋಡಿದಾಗ, “ಎಲ್ಲೋ ನೋಡಿದ ಹಾಗಿದ್ದಿಯಲ್ಲಾ” ಎಂದು ಅನಿಸಿತು. ಆಗಲೇ ಗೋತ್ತಾಗಿದ್ದು ಅವರು, “ಮಾಯಾಮೃಗ” ದ ‘ಶಾಸ್ತ್ರಿ’ ಎಂದೇ ಖ್ಯಾತರಾದ ದತ್ತಣ್ಣನವರು ಎಂದು. ಆಗಲೇ “ಸಂಪದ”ಗೆ ಇವರ ಸಂದರ್ಶನ ಇರಲೇಬೇಕೆಂದು ನಾವು ನಿರ್ಧರಿಸಿದ್ದು.
ಇವರ ಸಂಕ್ಷಿಪ್ತ ಪರಿಚಯ:
ಪೂರ್ಣ ನಾಮಧೇಯ – ಹೆಚ್.ಜಿ.ದತ್ತಾತ್ರೇಯ ;
ಹುಟ್ಟಿದ ವರ್ಷ/ಊರು – 1942/ಚಿತ್ರದುರ್ಗ;
ತಂದೆ-ತಾಯಿ – ಹರಿಹರ ಗುಂಡೂರಾವ್, ವೆಂಕಮ್ಮ;
ಎಂಜಿನಿಯರಿಂಗ್ ವಿಭಾಗ- ಎಲೆಕ್ಟ್ರಿಕಲ್
ಇತರ ವಿವರಗಳು- ಐಐಎಸ್‍ಇಯಿಂದ ಎಂಇ ಪದವಿ, ಭಾರತೀಯ ವಾಯುದಳದ ನಿವೃತ್ತ ವಿಂಗ್ ಕಮಾಂಡರ್; ಹೆಚ್.ಎ.ಎಲ್ ಕಾಲೇಜಿನ ಮಾಜಿ ಪ್ರಾಂಶುಪಾಲರು.
ಬಾಲ್ಯದಿಂದಲೂ ರಂಗಮಂಚದ ಬಗ್ಗೆ ಒಲವು ಹೊಂದಿದ್ದ ಇವರು, ಹಲವಾರು ನಾಟಕ-ಸಿನಿಮಾ-ಸಾಕ್ಷ್ಯಚಿತ್ರ-ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಬಿ.ವಿ.ಕಾರಂತ್, ಎಂ.ಎಸ್.ಸತ್ಯು, ಜಿ.ವಿ.ಅಯ್ಯರ್, ಗಿರೀಶ್ ಕಾಸರವಳ್ಳಿ, ಪಿ ಶೇಷಾದ್ರಿ, ನಾಗಾಭರಣ ಮುಂತಾದ ಘಟಾನುಘಟಿಗಳ ಜತೆ ಕೆಲಸ ಮಾಡಿದ್ದಾರೆ. “ಮುನ್ನುಡಿ”, “ಮೌನಿ”, “ಆಸ್ಫೋಟ” ಮುಂತಾದ ಹಲವಾರು ಪ್ರಶಸ್ತಿ ವಿಜೇತ ಚಲನಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿದ್ದಾರೆ. ಅವರ ಜತೆ ನಡೆಸಿದ ಒಂದು ಆಪ್ತ ಸಂಭಾಷಣೆಯ ಸಂಕ್ಷಿಪ್ತ ಭಾಗ ನಿಮ್ಮ ಮುಂದೆ:
(ನಾ) ಶ್ರೀ ಗುರುಭ್ಯೋ ನಮಃ ಎಂದು ವಂದಿಸಿ, ಗುರುಗಳಿಂದಲೇ ಪ್ರಾರಂಭಿಸೋಣ. ಯುವಿಸಿಇಯಲ್ಲಿ ನಿಮ್ಮ ಗುರುಗಳ ಕುರಿತು ಸ್ವಲ್ಪ ವಿವರ
(ದ) ಬಿ.ಆರ್. ನಾರಾಯಣ್ ಅಯ್ಯಂಗಾರ್ ಅಂತ ನಮ್ಮ ಪ್ರಾಂಶುಪಾಲರು. ಅವ್ರು ಯುವಿಸಿಇಯಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ್ರು. ಪ್ರೋ.ಚನ್ನಬಸವಯ್ಯ ಎಲಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾಗಿದ್ದರು. ನಂತರ, ಬಿಕೆ ರಾಮಯ್ಯ ಪ್ರಾಂಶುಪಾಲರಾದರು. Soil Mechanics ವಿಷಯವನ್ನು ಪರಿಚಯಿಸಿ, ಸಿವಿಲ್ ವಿಭಾಗವನ್ನು ದೊಡ್ಡದಾಗಿ ಬೆಳೆಸಿದರು. ಡಿ.ಬಿ.ನರಸಿಂಹಯ್ಯ ಬಹಳ ಒಳ್ಳೆಯ ಗುರುಗಳಾಗಿದ್ದರು. ಅವರ ಒಂದು ತರಗತಿ ಈಗಲೂ ಕಣ್ಮುಂದೆ ಕಟ್ಟಿದಂತಿದೆ. ಪ್ರೊ||ಟಿ ರಮೇಶನ್ Mathematics ಕಲಿಸುತ್ತಿದ್ರು. ಅದರಿಂದಲೇ ಗಣಿತ ಅಷ್ಟು ಸುಲಭ ಅಂತ ಅನ್ನಿಸಿದ್ದು. ಅಷ್ಟೇ ಅಲ್ಲದೇ ಅವರು ಒಳ್ಳೆಯ ನಟರೂ ಆಗಿದ್ದರು. ಅವ್ರು ಮತ್ತು ಆಗ ಇದ್ದ Librarian ಜತೆಗೂಡಿ ನಾಟಕ ಮಾಡಿದ್ರು. ಆಗ ಲೈಬ್ರರಿ ಮುಂದೆ stage ಇತ್ತು. ಅದ್ರ ಮುಂದೆ ಬೆಂಚುಗಳು ಇರ್ತಾ ಇದ್ವು (ಈಗ ಏನಾಗಿದೆ? ಅಂತ ಕೇಳಿದ್ದಕ್ಕೆ – ನಾವು , ಈಗ ಅಲ್ಲಿ ಮಿಂಚು ಇದೆ, ಮುಂದೆ Quadrangle ಮಾಡಿದ್ದಾರೆ ಅಂತ ಉತ್ತರಿಸಿದ್ವಿ) ನಾವು ಅಲ್ಲಿ ಕೂತು, ಮೇಲ್ಗಡೆ ಬಾಲ್ಕನಿಯಿಂದ ನಿಂತು ನೋಡ್ತಾ ಇದ್ವಿ. ಅವ್ರೇ ನಮ್ಗೆ Inspiration !! ಅವ್ರಿಗೆ ಸ್ವಲ್ಪ ನಾಟಕದಲ್ಲಿ ಆಸಕ್ತಿ ಹೊಂದಿದವ್ರ ಬಗ್ಗೆ ಒಲವು ಜಾಸ್ತಿಯಿತ್ತು. ಆದ್ದರಿಂದ ನಾವು ಅವ್ರ Close circleನಲ್ಲಿ ಬಂದ್ವಿ.
(ನಾ) ಸರ್, ಹೇಗಿದ್ರೂ ನಾಟಕದ ವಿಷ್ಯ ಬಂದಿದೆ, ನಿಮ್ಮ ಪೂರ್ವಾಶ್ರಮದ ಬಗ್ಗೆ, ನಾಟಕದ ಪ್ರಥಮಗಳ ಕುರಿತು ಸ್ವಲ್ಪ ವಿವರ
(ದ) ಇಲ್ಲಿಗೆ ಬರುವ ಮುಂಚೆ ಚಿತ್ರದುರ್ಗದಲ್ಲಿ ನಾಟಕ ಅಂತ ಸ್ವಲ್ಪ ಮಾಡ್ತಿದ್ದೆ. ಬೆಂಗಳೂರಿನಲ್ಲಿ ನಾನು ಮೊದಲನೆಯ ಸಲ ರಂಗಮಂಚ ಹತ್ತಿದ್ದು, ಕೆ.ಚಂದ್ರಶೇಖರಯ್ಯ (ಹಿರಿಯೂರು) ನವರ ನಿರ್ದೇಶನದ “Dunlop Girl” ಅನ್ನೋ ನಾಟಕದಲ್ಲಿ. ಎಂಜಿನಿಯರಿಂಗ್ ಕಾಲೇಜಿನಿಂದ ಪ್ರಥಮ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ನಾಟಕ ಮಾಡಿದ್ದು ಹೀಗೆ. ಅದು ಟೌನ್‍ಹಾಲ್‍ನಲ್ಲಿ Ullal Shield-ಗಾಗಿ ನಡೆದದ್ದು. Ullal Shield ಅನ್ನೋದು ಆಗ ಪ್ರಖ್ಯಾತ InterCollegiate Theatre Fest ಆಗಿತ್ತು. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಂದ್ರೆ ಬರೀ ಡ್ರಾಯಿಂಗ್ ಬೋರ್ಡ್, ಪುಸ್ತಕಗಳು ಅಷ್ಟೇ ಆಗಿತ್ತು ಆಗ.
(ನಾ) College Life ಬಗ್ಗೆ, ನಿಮ್ಮ ಅನುಭವಗಳ ಬಗ್ಗೆ ಸ್ವಲ್ಪ ಮೆಲುಕು ಹಾಕಿದ್ರೆ…
(ದ) ಬಹುಶಃ 1960ರಲ್ಲಿ, Student Unionನಲ್ಲಿ Cultural Secretary ಆದೆ. ಉದ್ಘಾಟನಾ, ಸಮಾರೋಪ ಸಮಾರಂಭಗಳನ್ನು ನಡೆಸಿಕೊಟ್ಟಿದ್ದೆ. ನಾವೆಲ್ಲಾ ಸೇರಿ ನಾಟಕ, ಚರ್ಚಾಸ್ಪರ್ಧೆಗಳನ್ನು ನಡೆಸುತ್ತಿದೆವು. Hostel Day ದಿನದಂದು ನಡೆಸಿದ ನಾಟಕವನ್ನು ಪ್ರೊ||ರಾಮೇಗೌಡ ನಿರ್ದೇಶಿಸಿದ್ದರು. ಸ್ವತಃ ಅವರು, ಆರ್.ಜಿ.ಭಟ್ (VSILನ ಮಾಜಿ ಜನರಲ್ ಮ್ಯಾನೆಜರ್), ಚಿದಾನಂದ (ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು), ಟಿ.ಎಸ್.ಪ್ರಹ್ಲಾದ್ (NAL), ಶಬೀರ್ ಅಹ್ಮದ್, ನಿವೃತ್ತ ಮೇಜರ್ ಜನರಲ್ ನೀಲಕಂಠಪ್ಪ- ಹೀಗೆ ನಾವೆಲ್ಲರೂ ಉತ್ಸಾಹದಿಂದ Debateನಲ್ಲಿ ಭಾಗವಹಿಸುತ್ತಿದ್ದೆವು. (ನೀಲಕಂಠಪ್ಪನವರೇ ನನ್ನ ಮೆಗಾರಿಯೂನಿಯನ್ ಕಾರ್ಯಕ್ರಮಕ್ಕೆ ಕರೆತಂದದ್ದು). ಸರ್ವೆಗಾಗಿ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿದ್ವಿ. ವಿದ್ಯಾರ್ಥಿವೇತನದಲ್ಲಿ ಮೆಸ್‍ಬಿಲ್, ಸಣ್ಣಪುಟ್ಟ ಖರ್ಚುಗಳಿಗೆ ಅಷ್ಟೇ ಅಲ್ಲದೇ, ಮನೆ ಖರ್ಚಿಗೂ ಸ್ವಲ್ಪ ಉಳಿಸ್ತಾ ಇದ್ದೆ. ಕೆನೆರಾ ಬ್ಯಾಂಕ್‍ನ ಪಠ್ಯಪುಸ್ತಕದ loan ತೆಗೆದುಕೊಂಡಿದ್ದೆ. ಹೆಚ್ಚು ಕಡಿಮೆ 170/- ರೂಪಾಯಿಗಳನ್ನು ಉಳಿಸಿ ತಕ್ಕಮಟ್ಟಿಗೆ ಶ್ರೀಮಂತನಾಗಿದ್ದೆ. ಜೀವನ ಅಭ್ಯಾಸ ಕೊಟ್ಟು, ವ್ಯಕ್ತಿತ್ವ ರೂಪಿಸಿದ್ದು ಹಾಸ್ಟೆಲ್. ಅದನ್ನು “School For Life Experience” ಅಂತ ಕರೀಬಹುದು.
(ನಾ) ಅದೆಲ್ಲಾ ಸರಿ ಸರ್, ಆದ್ರೆ ನೀವು ಯುವಿಸಿಇ ಕಾಲೇಜು ಸೇರಿದ್ದು ಯಾಕೆ? ಹೇಗೆ ?
(ದ) ಅಯ್ಯೋ, ಅದೊಂದು Strange Coincidence!!! ಎಸ್‍ಎಸ್‍ಎಲ್‍ಸಿಯಲ್ಲಿ ರಾಜ್ಯಕ್ಕೆ ಮೊದಲನೆಯ ರ್ಯಾಂಕ್ ನಾನು. ಪಿಯುನಲ್ಲಿ ರಾಜ್ಯಕ್ಕೆ ಎರಡನೆಯ ರ್ಯಾಂಕ್. ಮೈಸೂರಿಗೆ PCMನಲ್ಲಿ ನಾನು ಪ್ರಥಮ ಸ್ಥಾನದಲ್ಲಿದ್ದೆ. ಆಗಿನ ಕಾಲದಲ್ಲಿ ಸಾಮಾನ್ಯ ವರ್ಗದಲ್ಲಿ ಯುವಿಸಿಇ ಸಿಗೋದು ಅಂದ್ರೆ ದೊಡ್ಡ ವಿಷ್ಯ. ನಾನು Pure Science ಅಥವಾ Arts ಅಂತ ನಿರ್ಧಿರಿಸಿದ್ದೆ. ಆಗ ಪಿಯು ಇದ್ದಿದ್ದೆ ಒಂದು ವರ್ಷ. ನಿರ್ಧಾರ ಮಾಡೋ ವಯಸ್ಸಲ್ಲ ನಮ್ದು. ಮನೆಯಲ್ಲಿ ಹೇಳೋ ಮಾತೇ ಕೊನೆ. ಆಗ 1959ರಲ್ಲಿ ಐಐಟಿ-ಮದ್ರಾಸ್ ಶುರುವಾಯ್ತು. ತುಂಬಾ ಚೆನ್ನಾಗಿದೆ ಅಂದ್ರು- ಸರಿ ಹೋದೆ- Select ಆದೆ. 500 ರೂಪಾಯಿಗಳು ಫೀಸ್ ಕಟ್ಟಬೇಕಾಗಿತ್ತು. ಆ ದುಡ್ಡನ್ನು ನಮ್ಮಣ್ಣ ಕಳುಹಿಸಿದ್ರು. Fees Counter ಹತ್ರ ಹೋದವನಿಗೆ “5 ವರ್ಷ ಇಲ್ಲಿ ಕಳೆಯೋದು ಹೇಗೆ ? ಒಬ್ರೂ ಕನ್ನಡ ಮಾತಾಡೋರು ಇಲ್ಲ” ಅಂತ ವಾಪಸ್ ಬಂದೆ. ಅದೃಷ್ಟವಶಾತ್ , ಯುವಿಸಿಇಯಲ್ಲಿ ಅರ್ಜಿ ಹಾಕಿದ್ದೆ, ಬೇರೆ ಎಲ್ಲೂ ಪ್ರಯತ್ನನೇ ಮಾಡಿರಲ್ಲಿಲ್ಲ. ಪುಣ್ಯಕ್ಕೆ 16-18 ಸೀಟ್‍ಗಳಲ್ಲಿ, ನಂಗೆ ಕೂಡ ಸಿಕ್ತು.
(ನಾ) ಹಿಂದೆ ತಿರುಗಿ ನೋಡಿದ್ರ್, ಕಾಲೇಜ್ ಜೀವನ ಆದಮೇಲೆ ಹೇಗೆ ನಡೀತು?
(ದ) ಪರೀಕ್ಷೆ ಮುಗಿದ ದಿನ, ಕಾಲೇಜಿನ ಎದುರಿನಲ್ಲೇ ಇದ್ದ Executive Engineer ಆಫೀಸ್‍ಗೆ ಹೋದೆ. ಬಾಯಲ್ಲೇ Appointment Order – ಚಿತ್ರದುರ್ಗಕ್ಕೆ ಹೋಗು ಅಂತ. ಜೂನಿಯರ್ ಎಂಜಿನಿಯರ್ ಆಗಿ ಅಲ್ಲಿ ಹೋದ್ರೆ, ಅಲ್ಲಿಂದ ಹರಿಹರಕ್ಕೆ ಕಳುಹಿಸಿದ್ರು. ಹೇಗೋ ಕಷ್ಟಪಟ್ಟು ಚಿತ್ರದುರ್ಗಕ್ಕೆ ಬಂದು Meter & Relay Testing ಕೆಲಸ ಮಾಡ್ಕೊಂಡು ಇದ್ದೆ.( ಒಂದೆರಡು ತಿಂಗಳು ಅಷ್ಟೇ). NGFನಲ್ಲಿ ಆಯ್ಕೆಯಾಗಿ ಬೆಂಗಳೂರಿಗೆ ಬಂದೆ. ಆದ್ರೆ, ಬಸ್ಸು-ಊಟದ ವ್ಯವಸ್ಠೆ ಇಲ್ಲ. ಬೆಳಗ್ಗೆ 5ಕ್ಕೆ ಹೊರಟ್ರೆ ರಾತ್ರಿ ಬರೋದು 8 ಘಂಟೆ ಆದಮೇಲೆ. ಕಷ್ಟ ಅನಿಸಿ ಅಲ್ಲಿ ಕೆಲಸ ಬಿಟ್ಟೆ. Final Year ಅಲ್ಲಿ ಇದ್ದಾಗ್ಲೇ ಸೇನೆ,ನೌಕಾ,ವಾಯು ದಳಗಳಿಗೆ ಆಯ್ಕೆಯಾಗಿದ್ದೆ. ಅದಕ್ಕೆ ವಾಯುದಳವನ್ನು ಸೇರುವ ನಿರ್ಧಾರ ಮಾಡಿದೆ. ಇಪ್ಪತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ HAL Staff Collegeನಲ್ಲಿ ಪ್ರಾಂಶುಪಾಲನಾದೆ. 1987ರ ಸಮಯದಲ್ಲಿ ಟೀವಿ,ನಾಟಕ,ಸಿನಿಮಾಗಳಲ್ಲಿ ತೊಡಗಿಸಿಕೊಂಡೆ. ಸಮಯ ನಿರ್ವಹಣೆ ತೊಂದರೆಯಾಗಿ 1994ರಲ್ಲಿ ಪ್ರಾಂಶುಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದೆ.
ಪಿ.ಶೇಷಾದ್ರಿ ಅವರು ಬಂದು “ಮಾಯಮೃಗ” ಧಾರಾವಾಹಿಯ ಕಥೆ ಹೇಳಿದಾಗ, ಶಾಸ್ತ್ರಿ ಪಾತ್ರ ನೀಡುವುದಾದರೆ ಮಾತ್ರ ಒಪ್ಪುತ್ತೇನೆ ಎಂದೆ. “ಮಾಯಾಮೃಗ” ಯಾವ ರೀತಿಯಲ್ಲಿ ಮಧ್ಯಮವರ್ಗವನ್ನು ಆಕರ್ಷಿಸಿತು ಅನ್ನೋದು ಈಗ ಇತಿಹಾಸ (4.30-5ರ ಸಮಯದಲ್ಲಿ ಗಾಡಿಗಳು ತಿರುಗಾಡುವುದು ಕಡಿಮೆ ಆಗ್ತಿತ್ತು, ಸಭೆ-ಸಮಾರಂಭಗಳಲ್ಲಿ ಇದೇ ಚರ್ಚಾವಿಷಯವಾಗುತ್ತಿತ್ತು). “ಆಸ್ಫೋಟ” ಚಲನಚಿತ್ರಕ್ಕೆ ಮೊದಲಸಲ ರಾಜ್ಯಪ್ರಶಸ್ತಿ ಬಂತು; “ಮುನ್ನುಡಿ” ಚಿತ್ರಕ್ಕೆ “ಅತ್ಯುತ್ತಮ ಸಹಕಲಾವಿದ” ರಾಷ್ಟ್ರಪ್ರಶಸ್ತಿ, “ಶ್ರೇಷ್ಠ ನಟ” ರಾಜ್ಯ ಪ್ರಶಸ್ತಿ; “ಮೌನಿ” ಸಿನಿಮಾಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಬಂತು. ಇತ್ತೀಚಿಗೆ “ಬೆಟ್ಟದಜೀವ” ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದೆ. ಹೀಗಾಗಿ ನನ್ನ ನಿರ್ಧಾರಗಳು ನನಗೆ ಸಂತಸ ನೀಡಿವೆ.
(ನಾ) ಕಾಲೇಜಿನ ಸಮಯದಲ್ಲಿ ನಡೆದ ಕೆಲವು ಸ್ವಾರಸ್ಯಕರ ಘಟನೆಗಳನ್ನು ನಮ್ಮೊಡನೆ ಹಂಚ್ಕೋತೀರಾ?
(ದ) ನಾವು ಕಾಲೇಜಿಗೆ ಹೋಗ್ತಾ ಇದ್ದಿದ್ದು ಸೈಕಲ್ ಅಥವಾ 11 ನೆ ನಂಬರ್ ಬಿಟಿಎಸ್ ಬಸ್‍ನಲ್ಲಿ. ಒಂದೋ-ಎರಡೋ ಸ್ಕೂಟರ್-ಬೈಕ್ ಇದ್ವು. ಗಾಡಿ ಹತ್ತೋಕೆ ಹೋಗಿ ನಾರಾಯಣ್ ದಾಸ್ ಅನ್ನೋ ಸ್ನೇಹಿತನ ಗಾಡಿ ಬೀಳಿಸಿದ್ದೂ ಆಯ್ತು.
ನಮ್ಮ ಬ್ಯಾಚಿನಲ್ಲಿ ಬರೀ ಹುಡುಗರು ಅಷ್ಟೇ, ಹುಡುಗೀರೇ ಇರ್ಲಿಲ್ಲ. ಅದ್ದರಿಂದ, ನಾವೇ ನಾಟಕದ ಸ್ತ್ರೀಪಾತ್ರಗಳನ್ನ ಹೇಗೋ manage ಮಾಡ್ತಿದ್ವಿ. 2-3 ವರ್ಷಗಳ ನಂತರ ಕೆಲವು ಹುಡುಗೀರು ಕಾಲೇಜಿಗೆ ಸೇರಿದ್ರೂ, ನಾಟಕ ಮುಂತಾದವುಗಳಲ್ಲಿ ಭಾಗವಹಿಸುತ್ತಿರಲ್ಲಿಲ್ಲ.
ಪ್ರೊಫೆಸರ್-ಗಳ ಮುಂದೆ ಶ್ರದ್ಧಾ-ಭಕ್ತಿಗಳನ್ನು ಪ್ರದರ್ಶಿಸುತ್ತಾ ಇದ್ರೂ, ಪುಂಡುತನ ಮಾಡ್ತಾ ಇದ್ದಿದ್ದು ನಮ್ಮ ಗುಂಪೇ. ಒಂದು ಬಾರಿ, ಯಾವ್ದೋ ವಿಷ್ಯಕ್ಕೆ ವಿಪರೀತ ತಲೆಹರಟೆ ಮಾಡಿದ್ದಕ್ಕೆ, ಹಾಸ್ಟೇಲ್‍ನಲ್ಲಿ ಸೀಟು ಕೊಡಲ್ಲ ಅಂದ್ರು. ಆಗ, ಮೆಕ್ಯಾನಿಕಲ್ ವಿಭಾಗದ ಪ್ರೊ||ಗುಂಡುರಾವ್‍ರವರ ಕಾಲಿಗೆ ಬಿದ್ದು ಹೇಗೋ ಸೀಟು ಪಡೆದೆ.
ಎಂಜಿನಿಯರಿಂಗ್‍ನ ನಾನು Drawing Board/ Slide rule ಉಪಯೋಗಿಸದೇ ಮುಗಿಸ್ದೆ. Clarke’s Table ಅಷ್ಟೇ ಉಪಯೋಗಿಸಿದ್ದು, Calculator ನೋಡೇ ಇರ್ಲಿಲ್ಲ. ಅವೆಲ್ಲಾ ಭಾರಿ ದುಬಾರಿ ವಸ್ತುಗಳಾಗಿದ್ದವು ಆಗ. ನಾನು ಪ್ರಶ್ನೆಪತಿಕೆಗಳನ್ನು ದ್ವೇಷಿಸುತ್ತಿದ್ದೆ. ನನಗೆ Formulaಗಳನ್ನು ನೆನಪಿಟ್ಟುಕೊಳ್ಳಲು ಆಗ್ತಾನೇ ಇರ್ಲಿಲ್ಲ. ಒಂದು ವರ್ಷದಲ್ಲಿ ಓದಿದ್ದನ್ನು ಒಂದೇ ಸರ್ತಿ ಕಕ್ಕಬೇಕಲ್ಲ ಎಂದು ಬಹಳ ದುಃಖ ಆಗುತ್ತಿತ್ತು.
(ನಾ) ಕೊನೆ ಪ್ರಶ್ನೆ ಸರ್ ( ಸಾಕ್ರಯ್ಯ ಇಷ್ಟು ಅಂತ ಹೇಳಿದ್ದಕ್ಕೆ, ನಾವು ಕೇಳಿದ್ದು)- “ಭವಿಷ್ಯದಲ್ಲಿ ಯುವಿಸಿಇ ಹೇಗಿರಬೇಕು?”
(ದ) ಐಐಎಸ್‍ಇಯಲ್ಲಿ ಇರೋ ಥರ culture ಬೆಳೀಬೇಕು. ಅಂತಹ ವಾತಾವಾರಣ ನಿರ್ಮಾಣ ಆಗಬೇಕು. Intellectual Atmosphere ಇದ್ರೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕುತ್ತೆ. ಪ್ರೊಫೆಸರ್-ಗಳ ಮತ್ತು ವಿದ್ಯಾರ್ಥಿಗಳ ನಡುವೆ ಒಂದು ಆತ್ಮೀಯತೆ ಬೆಳೆಯಬೇಕು. ಈ ಬಾಂಧವ್ಯ ಅಭಿವೃದ್ಧಿಗೆ ಪೂರಕ. Mentorship concept ಬಂದ್ರೆ ಪ್ರತಿಯೊಬ್ಬ ವಿದ್ಯಾರ್ಥಿಗೆ personal attention ಸಿಗುತ್ತೆ. ಇದು ಬಹಳ ಮಹತ್ವದ್ದು. Project work ಮುಂತಾದುವುಗಳಿಗೆ ಇದು ಬಹಳ ಸಹಾಯಕಾರಿ. ಇವೆಲ್ಲವೂ ಸಹ ಆಗಬೇಕಾದರೆ, ಯುವಿಸಿಇ ಬಹುಶಃ ಒಂದು Quantum Leap ಅನ್ನು ತೆಗೆದುಕೊಳ್ಳಬೇಕಾಗುತ್ತದೆ.
ಹೀಗೆ ಸಂದರ್ಶನ ಮುಗಿಸುವಷ್ಟರಲ್ಲಿ, Frooti, ಬಿಸ್ಕೆಟ್ ಸೇವನೆ ಆಗಿತ್ತು. ಅವರೇ ಸ್ವತಃ ನಮ್ಮನ್ನು ಬೀಳ್ಕೊಡಲು ಗೇಟಿನವರೆಗೆ ಬಂದರು. ಈ ಆಪ್ತ ಮಾತುಕತೆ ಸದಾ ನಮ್ಮ ನೆನಪಿನ ತಿಜೋರಿಯಲ್ಲಿ ಭದ್ರವಾಗಿರುತ್ತದೆ. ನಿಮ್ಮೊಂದಿಗೆ ಈ ಅನುಭವವನ್ನು ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ.

Read Online  Download  View All Editions  Feedback/Comments