ಸಂಪದದ ಹತ್ತನೆಯ ವಾರ್ಷಿಕೋತ್ಸವಕ್ಕೆ ಹಳೆಯ ಸಂಪುಟಗಳಿಂದ ಆಯ್ದ – ವಿಶೇಷ ಸಂಪಾದಕೀಯ ಲೇಖನಗಳು – ಸುಧೀಂದ್ರ ಹಾಲ್ದೊಡ್ಡೇರಿಯವರ ನೆನಪಿನಂಗಳದಿಂದ

ಮೂವತ್ತೆರಡು ವರ್ಷಗಳ ಹಿಂದೆ (1979) ಹತ್ತು ಸೆಮೆಸ್ಟರ್‍ಗಳ-ಐದು ವರ್ಷದ ಕೋರ್ಸಿಗೆಂದು ಕರ್ನಾಟಕದಲ್ಲಿಯೇ ನಂಬರ್ 1ರ ಸ್ಥಾನದಲ್ಲಿದ್ದ ಯು.ವಿ.ಸಿ.ಇ. ಸೇರಿದಾಗ ನಮ್ಮೆಲ್ಲರಲ್ಲೂ ಅದಮ್ಯ ಉತ್ಸಾಹ. ಹಳೆಯ ಕಟ್ಟಡಗಳು, ಅಷ್ಟೇ ಹಳೆಯ ಪ್ರಯೋಗಶಾಲೆಗಳು ಅವುಗಳ ನಡುವೆ ಕೇವಲ ಬೆಂಗಳೂರು ವಿಶ್ವವಿದ್ಯಾಲಯವಷ್ಟೇ ಅಲ್ಲ, ದೇಶದ ಅನೇಕ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೂ ಹೆಸರು ಮಾಡಿದ್ದ ಬೋಧಕರು. ಕ್ಲಾಸಿಗೆಂದು ಕುಳಿತರೆ ಕೋಣೆಯಿಡೀ ತುಂಬುತ್ತಿದ್ದ ಹತ್ತಿರ ಹತ್ತಿರ ನೂರು ವಿದ್ಯಾರ್ಥಿಗಳು. ಪೀರಿಯಡ್‍ಗಳು ದಿನವಿಡೀ ಹರಡಿ ಹೋಗುತ್ತಿದ್ದ ಕಾರಣ, ಮಧ್ಯಂತರ ಬಿಡುವುಗಳು ನಮಗೆ ಸುಲಭ ಲಭ್ಯವಾಗಿದ್ದವು. ಆ ಕಾಲಾವಧಿಯಲ್ಲಿ ಕಟ್ಟೆಯ ಮೇಲೆ ಕುಳಿತು ಒಂದಷ್ಟು ಮಂದಿ ಹರಟೆ ಹೊಡೆದರೆ, ಮತ್ತಷ್ಟು ಗಂಭೀರ ವದನರು ಗ್ರಂಥಾಲಯದ ಮೊರೆ ಹೋಗುತ್ತಿದ್ದರು. ಇವೆರಡು ತಂಡಗಳ ನಡುವೆ ತಮ್ಮಷ್ಟಕ್ಕೆ ತಾವು ಕೂತು ಚಿತ್ರ ಬಿಡಿಸುವವರು, ಕಥೆ-ಕಾವ್ಯ ರಚಿಸುವವರು, ಸ್ಫರ್ಧೆಯೊಂದಕ್ಕೆ ಗಾಯನ ಅಥವಾ ನಟನೆಯ ಅಭ್ಯಾಸ ಮಾಡಿಕೊಳ್ಳುವವರೂ ಇದ್ದರು. ಅ ಕಾಲ. ಸೆಮೆಸ್ಟರ್ ಒಂದಕ್ಕೆ ಬೋಧನಾ ಶುಲ್ಕ ನೂರೈವತ್ತು ರೂಪಾಯಿಗಳು ಮಾತ್ರ ಪಾವತಿ ಮಾಡುತ್ತಿದ್ದ ಆ ಕಾಲದಲ್ಲಿ ಐದು ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಪ್ಯಾಂಟಿನ ಒಳಜೇಬಿನಲ್ಲಿ ಭದ್ರವಾಗಿಟ್ಟುಕೊಳ್ಳುತ್ತಿದ್ದೆವು. ಬಹುತೇಕ ಹುಡುಗರು ಬೈಸಿಕಲ್ ಬಳಸುತ್ತಿದ್ದೆವು, ಇಲ್ಲವೇ ಬಿ.ಟಿ.ಎಸ್.ನ ಬಸ್-ಪಾಸ್ ಅನುಕೂಲ ಪಡೆದಿದ್ದೆವು. ಅಪರೂಪಕ್ಕೊಂದರಂತೆ ವೆಸ್ಪಾ/ಲ್ಯಾಂಬ್ರೆಟಾ ಸ್ಕೂಟರ್ ಅಥವಾ ಯೆಝ್ದಿ ಮೋಟರ್‍ಬೈಕ್ ಕಣ್ಣಿಗೆ ಬೀಳುತ್ತಿದ್ದವು. ಕಬ್ಬನ್ ಪಾರ್ಕ್, ಕೆಂಪೇಗೌಡ ರಸ್ತೆಗಳು ತೀರಾ ಸಮೀಪವಿದ್ದರೂ ಕ್ಲಾಸುಗಳಿಲ್ಲದಿದ್ದ ಮಧ್ಯಾಹ್ನಗಳಂದು ಬೋಟಿಂಗ್ ಮಾಡಲು ಹಲಸೂರು ಕೆರೆಯತ್ತ ಸೈಕಲ್ ತಿರುಗಿಸುತ್ತಿದ್ದೆವು. ಹುಟ್ಟು ಹಾಕಿ ದೋಣಿ ನಡೆಸುವ ಅವಕಾಶವೇ ನಮಗಾಗ ದೊಡ್ಡ ಎಂಟರ್‍ಟೇನ್‍ಮೆಂಟ್. ಬೆಂಗಳೂರಿನ ರಸ್ತೆಗಳಷ್ಟೇ ಟೆನ್ಶನ್ ರಹಿತ ಸ್ಟೂಡೆಂಟ್ ಲೈಫ್ ನಮ್ಮದಾಗಿತ್ತು. ದೇವರಾಜ ಅರಸು ಅಧಿಕಾರ ಕಳೆದುಕೊಂಡು ಗುಂಡೂರಾವ್ ಆಡಳಿತ ನಡೆಸುತ್ತಿದ್ದರು. ರಾಜಕೀಯ ಪಲ್ಲಟಗಳು ಹೆಚ್ಚಾಗಿದ್ದ ಕಾರಣ, ಮುಷ್ಕರಗಳು ತೀರಾ ಸಾಮಾನ್ಯವಾಗಿದ್ದವು. ಪರೀಕ್ಷೆಗಳು ಮುಂದೆ ಹೋಗಬೇಕೆಂದಾಗ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಯು.ವಿ.ಸಿ.ಇ. ಮುಂದೆ ಪ್ರತಿಭಟನೆ ನಡೆಸಿ, ನಮ್ಮ ಕ್ಲಾಸುಗಳಿಗೂ ಕಂಟಕ ತಂದು, ವಿಶ್ವವಿದ್ಯಾಲಯ ಕಚೇರಿಯತ್ತ ನಡೆಯುತ್ತಿದ್ದರು.

ನಮ್ಮ ಬ್ಯಾಚಿನ ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಐ.ಐ.ಎಸ್‍ಸಿ., ಐ.ಐ.ಎಂ., ಬಿ.ಎಂ.ಎಸ್.ಸಿ.ಇ., ಸೇರಿದಂತೆ ಮೈಸೂರಿನ ಎನ್.ಐ.ಇ., ಎಸ್.ಜೆ.ಸಿ.ಇ. ಕಾಲೇಜುಗಳು ನಡೆಸುತ್ತಿದ್ದ ಲಲಿತಕಲಾ ಸ್ಫರ್ಧೆಗಳಲ್ಲಿ ಭಾಗವಹಿಸಿ ಹೆಚ್ಚು ಬಹುಮಾನಗಳನ್ನು ಗಿಟ್ಟಿಸಿದರು. ನಮ್ಮಲ್ಲನೇಕರು ತಾವು ಹಿಂದೆ ಪಿ.ಯು.ಸಿ. ಕಲಿಯುತ್ತಿದ್ದ ಕಾಲೇಜುಗಳಲ್ಲಿ ನಟನ ಚತುರರಾಗಿದ್ದರು. ನಾವು ಎಂಜಿನಿಯರಿಂಗ್ ಸೇರಿದ ಎರಡು ವರ್ಷಗಳ ನಂತರ ಮೆಕ್ಯಾನಿಕಲ್ ಬ್ರಾಂಚಿಗೇ ಸೇರಿದ ಜಿ.ರಮೇಶ್ ಆ ಕಾಲಕ್ಕೇ ನಟನೆಯಲ್ಲಿ ಹೆಸರು ಮಾಡಿದ್ದ. ವಯಸ್ಸಿನಲ್ಲಿ ಕಿರಿಯವನಾದರೂ ನಮ್ಮ ಸೀನಿಯರ್ ತಂಡಕ್ಕೆ ಅವನೇ ನಾಯಕನಾದ. ಕಲೆ-ಸಾಹಿತ್ಯದಲ್ಲಿ ತೀವ್ರ ಆಸಕ್ತಿಯಿದ್ದ ಆರ್.ಗಣೇಶ್ ತಂಡದ ಕಾರ್ಯಕ್ರಮಗಳಿಗೆ ಸಾಹಿತ್ಯ ಸಿಂಚನ ನೀಡುತ್ತಿದ್ದ. ಕಾಲಚಕ್ರ ಉರುಳಿತು. 1984ರ ಅಕ್ಟೋಬರ್ 31ರಂದು ನಮ್ಮ ಕೊನೆಯ ಸೆಮೆಸ್ಟರ್‍ನ ಕೊನೆಯ ಪರೀಕ್ಷೆ. ಅಂದೇ ಪ್ರಧಾನಿ ಇಂದಿರಾ ಗಾಂಧಿಯವರು ಗುಂಡೇಟಿಗೆ ಬಲಿಯಾದರು. ಪರೀಕ್ಷೆ ನವೆಂಬರ್ 20ಕ್ಕೆ ಮುಂದೆ ಹೋಯಿತು. ನಮ್ಮ ನಂತರ ಎಂಜಿನಿಯರಿಂಗ್ ಕೋರ್ಸಿಗೆ ಸೇರ್ಪಡೆಯಾಗಿದ್ದವರಿಗೆ ನಾಲ್ಕು ವರ್ಷದ ಪದವಿ. ನಮ್ಮೊಂದಿಗೇ ಕೋರ್ಸು ಮುಗಿಸುವವರಿದ್ದರು. ಅಂತೂ ಇಂತೂ ಡಿಸೆಂಬರ್ 31ರ ಸಂಜೆ ಫಲಿತಾಂಶಗಳು ಹೊರಬಿದ್ದವು. 1984ರಲ್ಲೇ ಪದವಿ ಪಡೆದೆವು.

ಕೆಲವರು ಮುಂದಿನ ಓದಿಗೆಂದು ಅಮೆರಿಕದತ್ತ ಹೊರಟರು. ಒಂದಷ್ಟು ಜನ ಇಲ್ಲಿಯೇ ಪದವಿಯೋತ್ತರ ಅಧ್ಯಯನಕ್ಕೆ ಪ್ರಯತ್ನಿಸಿದರು. ಕೆಲವರು ಐ.ಐ.ಎಸ್‍ಸಿ.ಯಲ್ಲಿ ಕಲಿಕೆ-ಗಳಿಕೆ ಎರಡಕ್ಕೂ ಅವಕಾಶವಿರುವ ಸಂಶೋಧಕ ಹುದ್ದೆಗೆ ಆಕರ್ಷಿತರಾದರು. ಇಸ್ರೋ, ಡಿ.ಆರ್.ಡಿ.ಓ, ಬಾರ್ಕ್‍ಗಳಿಗೂ ಒಂದಷ್ಟು ಜನ ಆಯ್ಕೆಯಾದರು. ಪ್ರತಿಷ್ಟಿತ ಇನ್‍ಫೋಸಿಸ್ ಆಗಷ್ಟೇ ಕ್ಯಾಂಪಸ್ ಸಂದರ್ಶನಗಳನ್ನು ಆರಂಭಿಸಿತ್ತು. ಒಂದಿಬ್ಬರಿಗೆ ಅಲ್ಲಿಯೇ ಕೆಲಸ ಸಿಕ್ಕಿತು. ಉಳಿದಂತೆ ಎಚ್.ಎ.ಎಲ್., ಎಚ್.ಎಂ.ಟಿ., ಕುದುರೆಮುಖ ಐರನ್ ಓರ್ ಕಂಪನಿಗಳಲ್ಲೂ ಕೆಲವರಿಗೆ ಅವಕಾಶ ಸಿಕ್ಕವು. ಟಿ.ವಿ.ಎಸ್., ಎ.ಬಿ.ಬಿ.ಗಳಂಥ ಕಂಪನಿಗಳಿಗೂ ಕೆಲವರು ಸೇರ್ಪಡೆಯಾದರು. ಒಂದಷ್ಟು ಸಾಹಸಿಗಳು ತಮ್ಮದೇ ಉದ್ಯಮ ನಡೆಸ ಹೊರಟರು. ಇನ್ನೂ ಕೆಲವರು ಬೋಧಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. ಕೆ.ಎ.ಎಸ್. ಬರೆದು ಸರ್ಕಾರಿ ಕೆಲಸದತ್ತಲೂ ಕೆಲವರು ಆಸಕ್ತಿ ಕುದುರಿಸಿಕೊಂಡರು. ಹೀಗೆ ಸಂಪರ್ಕ ಕಡಿದುಹೋಗುತ್ತಿದ್ದ ಸಂದರ್ಭದಲ್ಲಿ, ಅಮೆರಿಕದಲ್ಲಿ ಉನ್ನತ ಅಧ್ಯಯನ, ಹುದ್ದೆಗಳನ್ನಲಂಕರಿಸಿದ್ದ ಟಿ.ಎಸ್.ಗಿರಿಧರ್ ಭಾರತಕ್ಕೆ ಹಿಂದಿರುಗಿದ. ಎಲ್ಲರ ಸಂಪರ್ಕಗಳನ್ನು ಪಡೆದು, ಆಗಿಂದಾಗ್ಗೆ ಗೆಟ್ ಟುಗೆದರ್- ಗಳನ್ನು ಏರ್ಪಡಿಸಲಾರಂಭಿಸಿದ. ಹಳೆಯ ಸಂಬಂಧ ಮತ್ತೆ ಚಿಗುರೊಡೆಯಿತು.

ಕೋರ್ಸ್ ಮುಗಿಸಿದ ರಜತೋತ್ಸವ ಸಂಘಟಿಸಿದಾಗ ನಲವತ್ತರಿಂದ ನಲವತ್ತೈದು ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿದ್ದೆವು. ಎಷ್ಟೋ ಜನ ಗುರುತಿಸಲಾಗದಷ್ಟು ಚಹರೆ ಬದಲಿಸಿಕೊಂಡಿದ್ದರು. ಅದೆಷ್ಟೋ ಜನ ಊಹಿಸಲೂ ಆಗದಷ್ಟು ಎತ್ತರದ ಸ್ಥಾನಗಳನ್ನಲಂಕರಿಸಿದ್ದರು. ವಿದ್ಯಾರ್ಥಿ ದಿನಗಳತ್ತ ಜಾರಿ ಹೋದಾಗಿನ ಅನುಭವ ಅತ್ಯಂತ ಮಧುರವಾಗಿತ್ತು. ಮಕ್ಕಳ ಮದುವೆಗಳ ಸಂಭ್ರಮದಲ್ಲಿ ಕೆಲವರಿದ್ದಾರೆ. ಒಬ್ಬನಂತೂ ಈಗಾಗಲೇ ಅಜ್ಜನಾಗಿದ್ದಾನೆ. ಉಳಿದಂತೆ, ಮದುವೆಯಾಗದ ಗಣೇಶನಂಥವನನ್ನು ಬಿಟ್ಟರೆ, ಬಹುತೇಕ ಸಹಪಾಠಿಗಳ ಮಕ್ಕಳು ಇನ್ನೂ ಎಂಜಿನಿಯರಿಂಗ್ ಕಲಿಯುತ್ತಿದ್ದಾರೆ.

ಒಬ್ಬೊಬ್ಬರಾಗಿ ಸಹಪಾಠಿಗಳು ಐವತ್ತನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 16ರಂದು ಈಗ ಗಿರಿ ತಿರುಮಲೆ ಆಗಿರುವ ಎಕ್ಸಿಲಾಂಟ್ ಸಾಫ್ಟ್‍ವೇರ್ ಕಂಪನಿಯ ಹಿರಿಯ ಉಪಾಧ್ಯಕ್ಷ ಟಿ.ಎಸ್.ಗಿರಿಧರ್‍ನ ಹುಟ್ಟುಹಬ್ಬ ನಡೆಯಿತು. ಈಗ ಶತಾವಧಾನಿ ಡಾ|| ಆರ್.ಗಣೇಶ್ ಆಗಿರುವ ಗಣೇಶ ಬಂದಿದ್ದ. ಇತ್ತೀಚೆಗಷ್ಟೇ ಇನ್ಫೋಸಿಸ್‍ನ ಬೋರ್ಡ್‍ಗೆ ನೇಮಕವಾಗಿರುವ ಬಿ.ಜಿ.ಶ್ರೀನಿವಾಸ್ ಹಾಜರಿದ್ದ. ಟಿ.ವಿ.ಎಸ್. ಮೋಟಾರ್ ಕಂಪನಿಯ ಇಂಡೋನೇಶಿಯಾ ಕಾರ್ಯಾಚರಣೆ ಪಿ.ಟಿ. ಟಿ.ವಿ.ಎಸ್.ನ ಅಧ್ಯಕ್ಷ-ನಿರ್ದೇಶಕ ಬಿ.ಎಲ್.ಪಿ.ಸಿಂಹ ಜೊತೆಗಿದ್ದ. ಎಕ್ಸಿಲಾಂಟ್ ಕಂಪನಿಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲ್.ವಾಸುದೇವ ರಾವ್ ಕೂಡಾ ನಮ್ಮೊಂದಿಗಿದ್ದ. ಅವನೊಟ್ಟಿಗೆ ಎಕ್ಸಿಲಾಂಟ್‍ನ ಸಹಸ್ಥಾಪಕ ಹಾಗೂ ಕಾಲೇಜಿನಲ್ಲಿ ನಮ್ಮ ಎರಡು ವರ್ಷದ ಜೂನಿಯರ್ ಶ್ರೀನಾಥ್ ಬಂದಿದ್ದ. ಹಾಗೆಯೇ ಕೊಲಾಬೆರಾ ಸಲ್ಯೂಶನ್ಸ್‍ನ ಅಧ್ಯಕ್ಷ ಹಾಗೂ ಮುಖ್ಯ ನಿರ್ವಹಣಾ ಅಧಿಕಾರಿ ಮೋಹನ್ ಶೇಖರ್ ಆಗಮಿಸಿದ್ದ. ಪ್ರಸಿದ್ಧ ಯೋಗಬೋಧಕ, ಭಾರತ ಕ್ರಿಕೆಟ್ ಟೀಮ್‍ನ ಯೋಗಗುರು ಹಾಗೂ ಭಾರತೀಯ ವಿಜ್ಞಾನ ಮಂದಿರದ ಏರೋಸ್ಪೇಸ್ ಎಂಜಿನಿಯರಿಂಗ್ ಬೋಧಕ ಡಾ||ಎಸ್.ಎನ್.ಓಂಕಾರ್ ಜತೆಗೂಡಿದ್ದ. ಟಿ.ವಿ.ಎಸ್. ಟರ್ಬೋ ಎನರ್ಜಿಯ ಜನರಲ್ ಮ್ಯಾನೇಜರ್ ಟಿ.ಆರ್.ರವಿಶಂಕರ್ ಕೂಡಾ ಅಂದು ಬಂದಿದ್ದ.

ಸಾಧಕರ ಸಾಲು ಸಾಲೇ ನಮ್ಮ ಹಳೆಯ ಸಹಪಾಠಿಗಳ ಪಟ್ಟಿಯಲ್ಲಿದೆ. ಅತ್ಯಂತ ಕಿರಿ ವಯಸ್ಸಿನಲ್ಲಿ ಐ.ಐ.ಎಸ್‍ಸಿ.ಯ ಪ್ರೊಫೆಸರ್ ಆದ ಡಾ||ಕೆ.ಎನ್. ಲಕ್ಷ್ಮೀಶ, ಡಿ.ಎನ್.ಎ. ನೆಟ್‍ವಕ್ರ್ಸ್‍ನ ಟಿ.ವೆಂಕಟವರ್ಧನ್, ಬ್ರೇಕ್ಸ್ ಇಂಡಿಯ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಆರ್.ಶ್ರೀಕಾಂತ್, ಹಿಂದೆ ಉಲ್ಲೇಖಿಸಿದ ಜಿ.ರಮೇಶ್ ಈಗ ಜನಪ್ರಿಯ ಚಿತ್ರನಟ ರಮೇಶ್ ಅರವಿಂದ್, ಇಸ್ರೋದಲ್ಲಿ ವಿಜ್ಞಾನಿಗಳಾಗಿರುವ ಡಾ||ರಂಗನಾಥ್, ಟಿ.ಎಸ್.ಶ್ರೀರಂಗ, ರಾಮ್‍ಕುಮಾರ್, ಡಿ.ಆರ್.ಡಿ.ಓ.ದ ಜಿ.ಟಿ.ಆರ್.ಇ.ನಲ್ಲಿ ಹೆಚ್ಚುವರಿ ನಿರ್ದೇಶಕ ಪಾರ್ಥಿಬನ್, ಯು.ವಿ.ಸಿ.ಇ. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್‍ಗಳಾದ ಲಕ್ಷ್ಮಣಸ್ವಾಮಿ, ಪಾಲ್ ವಿಳಿಯನ್. ಬಿರ್ಲಾ ಸಮೂಹದ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಜನರಲ್ ಮ್ಯಾನೇಜರ್ ಆನಂದ್ ಜಗನ್ನಾಥ ರಾವ್, ಸಾರಿಗೆ ಇಲಾಖೆಯ ಡೆಪ್ಯೂಟಿ ಕಮೀಷನರ್ ಆಗಿರುವ ನರೇಂದ್ರ ಹೋಳ್ಕರ್ .. ಸದ್ಯಕ್ಕೆ ನೆನಪಿಗೆ ಬಂದ ಹೆಸರುಗಳು.

ಯು.ವಿ.ಸಿ.ಇ. ಇಂದ ಕಲಿತ ನಮ್ಮಲ್ಲನೇಕರು ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದು ಹೇಗೆ? ಎಂಬ ಪುನರಾವಲೋಕನ ಮಾಡಿದರೆ ಸಿಗುವ ಹೊಳಹುಗಳು ಹತ್ತಾರು. ಮೊದಲೇ ಬರೆದಂತೆ ಅತ್ಯುನ್ನತ ಮಟ್ಟದ ಬೋಧಕ ವರ್ಗ. ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಒತ್ತಡ ರಹಿತ ಸ್ವಾತಂತ್ರ್ಯ. ಜತೆಗೆ ನಮ್ಮಲ್ಲೇ ಇದ್ದ ಆರೋಗ್ಯಕರ ಸ್ಫರ್ಧೆ. ಮೂಲಭೂತ ಸೌಕರ್ಯಗಳ ಕೊರೆತೆಯಿದ್ದ ಕಾರಣ ಸ್ವಾವಲಂಬಿಗಳಾಗಬೇಕೆಂಬ ಛಲ ಸದಾ ನಮ್ಮಲ್ಲಿತ್ತು. ಎಲ್ಲಕ್ಕೂ ಮಿಗಿಲಾಗಿ ರಾಜ್ಯದ ನಂಬರ್ 1ನೆಯ ಕಾಲೇಜೆಂಬ ಹೆಗ್ಗಳಿಕೆ ಯು.ವಿ.ಸಿ.ಇ.ಯದು. ಹೀಗಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳೇ ನಮ್ಮ ಸಹಪಾಠಿಗಳಾಗಿರುತ್ತಿದ್ದರು. ಒಟ್ಟಿನಲ್ಲಿ ಯು.ವಿ.ಸಿ.ಇ.ಯಿಂದ ನಾವು ಪಡೆದದ್ದೆಷ್ಟು? ಎಂಬ ಲೆಕ್ಕಾಚಾರ ಮುಗಿಯಲಾರದ್ದು. ಆಯಕಟ್ಟಿನ ಸಮಯದಲ್ಲಿ ನಮ್ಮೆಲ್ಲರನ್ನು ತಿದ್ದಿ, ತೀಡಿ, ರೂಪಿಸಿದ ವಿದ್ಯಾಸಂಸ್ಥೆಯಿದು. ಆ ಒಂದು ಅನುಭವದ ಯಾತ್ರೆಯಲ್ಲಿ ಭಾಗವಹಿಸಿದವರೆಲ್ಲರೂ ಧನ್ಯರು.

ರಾಜ್ಯೋತ್ಸವ ಸಂದರ್ಭದಲ್ಲಿ ಮರೆಯದೆಯೇ ದಾಖಲಿಸಬೇಕಾದ ಒಂದೆರಡು ಸಾಲುಗಳಿವೆ. ಕಾರ್ಯಚಟುವಟಿಕೆ ಬಹುತೇಕ ನಿಂತು ಹೋಗಿದ್ದ ಕನ್ನಡ ಸಂಘಕ್ಕೆ ನಾವಿದ್ದ ಸಮಯದಲ್ಲಿಯೇ ಮರು ಚೈತನ್ಯ ಬಂದಿತು. ಹೆಚ್ಚು ರಾಜಕೀಯ ನೆಂಟಸ್ಥಿಕೆಯಿದ್ದ ಎಲೆಕ್ಟ್ರಾನಿಕ್ಸ್ ವಿಭಾಗದ ವೆಂಕಟನಾರಾಯಣ ಈ ಕಾರ್ಯದ ಸೂತ್ರಧಾರಿ. ಅವನ ಒತ್ತಾಯದ ಮೇರೆಗೆ ನನ್ನ ಒಂದು ವರ್ಷದ ಸೀನಿಯರ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಸಿ.ಪಿ.ರವಿಕುಮಾರ್ ಕಾರ್ಯದರ್ಶಿ ಸ್ಥಾನ ವಹಿಸಿಕೊಂಡ. ಅವನ ಸಹಾಯಕ್ಕೆಂದು ನಾನು ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ, ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣ, ಪ್ರಸಿದ್ಧ ಗಾಯಕ ಬಾಳಪ್ಪ ಹುಕ್ಕೇರಿ, ಹಿರಿಯ ಕವಿ ಡಾ||ಚಂದ್ರಶೇಖರ ಕಂಬಾರ ಇವರೆಲ್ಲರನ್ನೂ ಸಮಾರಂಭಗಳಿಗೆ ಕರೆಸಿದ್ದ ನೆನಪು ಇನ್ನೂ ಮಾಸಿಲ್ಲ. ಹಾಗೆಯೇ ವಿದ್ಯಾರ್ಥಿಗಳಿಗೆ ಕನ್ನಡ ಪ್ರಬಂಧ, ಚರ್ಚೆ, ಗಾಯನ ಸ್ಫರ್ಧೆಗಳನ್ನು ಏರ್ಪಡಿಸಿ, ಅದ್ಧೂರಿಯಾಗಿಯೇ ರಾಜ್ಯೋತ್ಸವವನ್ನು ನಾವು ಆಚರಿಸಿದ್ದೆವು. ಇಲ್ಲಿ ಪ್ರಸ್ತಾಪಿಸಿದ ರವಿಕುಮಾರ್ ಒಬ್ಬ ಕವಿ ಹಾಗೂ ಕತೆಗಾರನಾಗಿ ಆಗಲೇ ಹೆಸರು ಮಾಡಿದ್ದ. ಮುಂದೆ ಐ.ಐ.ಎಸ್‍ಸಿ.ಯಿಂದ ಎಂ.ಇ. ಪದವಿ ಹಾಗೂ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು ದೆಹಲಿಯ ಐ.ಐ.ಟಿ.ಯಲ್ಲಿ ಪ್ರಾಧ್ಯಾಪಕನಾಗಿದ್ದವನು, ಪ್ರಸ್ತುತ ಟೆಕ್ಸಾಸ್ ಇನ್‍ಸ್ಟ್ರುಮೆಂಟ್ಸ್‍ನ ತಾಂತ್ರಿಕ ನಿರ್ದೇಶಕನಾಗಿದ್ದಾನೆ. ಹಾಗೆಯೇ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೇ ಹೆಚ್ಚು ಒಡನಾಟವಿಟ್ಟುಕೊಂಡಿದ್ದ ಸಿವಿಲ್ ಎಂಜಿನಿಯರಿಂಗ್‍ನ ಕೆ.ಸತೀಶ್ ಕುಮಾರ್, ಡಾಕ್ಟರೇಟ್ ಅಧ್ಯಯನದ ನಂತರ ಅಮೆರಿಕದಲಿ ಕೆಲ ಕಾಲವಿದ್ದು ಸದ್ಯಕ್ಕೆ ಬೆಂಗಳೂರಿನ ಆಲ್ಟ್‍ಏರ್ ಎಂಜಿನಿಯರಿಂಗ್ ಸರ್ವೀಸಸ್‍ನ ನಿರ್ದೇಶಕನಾಗಿದ್ದಾನೆ.

ಇತಿಹಾಸದ ದೃಷ್ಟಿಯಿಂದ ನೋಡಿದರೆ ನಮ್ಮ ಯು.ವಿ.ಸಿ.ಇ. ದೇಶದ ನಾಲ್ಕನೆಯ ಅಥವಾ ಐದನೆಯ ಎಂಜಿನಿಯರಿಂಗ್ ಕಾಲೇಜಿರಬಹುದು. ಮದ್ರಾಸ್ ಹಾಗೂ ಪೂನಾದಲ್ಲಿದ್ದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಮೈಸೂರು ವಿದ್ಯಾರ್ಥಿಗಳಿಗೆ ಹೆಚ್ಚು ಅವಕಾಶಗಳು ಲಭ್ಯವಾಗುತ್ತಿರಲಿಲ್ಲ. ಹೀಗಾಗಿ ಅಂದು ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ 1912ರಲ್ಲಿ ಆರಂಭಿಸಿದ್ದು ಸ್ಕೂಲ್ ಆಫ್ ಎಂಜಿನಿಯರಿಂಗ್. ಅಲ್ಲಿ ಮೊದಲು ಬೋಧನೆಯಾದದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯಗಳು. ನಂತರ 1917ರಲ್ಲಿ ಅದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಾಗಿ ಪರಿವರ್ತನೆಯಾಯಿತು. ಮೈಸೂರು ರಾಜ್ಯವಷ್ಟೇ ಅಲ್ಲ, ಇಡೀ ದೇಶದ ಮುಂಚೂಣಿ ಪ್ರಯೋಗಶಾಲೆಗಳು, ಪ್ರಸಿದ್ಧ ಕೈಗಾರಿಕೆಗಳು, ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ನೇತೃತ್ವವನ್ನು ಯು.ವಿ.ಸಿ.ಇ. ಪದವೀಧರರು ವಹಿಸಿದ್ದಾರೆ. ಇಂಥ ಹೆಗ್ಗಳಿಕೆಯ ಕಾಲೇಜಿಗಿಂದು ಕಾಯಕಲ್ಪ ಬೇಕಾಗಿದೆ. ಯು.ವಿ.ಸಿ.ಇ. ನಂತರ ಸ್ಥಾಪನೆಯಾದ ಬಹಳ ಎಂಜಿನಿಯರಿಂಗ್ ಕಾಲೇಜುಗಳಿಂದು ಐ.ಐ.ಟಿ. ಅಥವಾ ಎನ್.ಐ.ಟಿ. ಸ್ಥಾನಗಳನ್ನು ಪಡೆದಿವೆ. ಯು.ವಿ.ಸಿ.ಇ.ಯನ್ನು ಆ ಮಟ್ಟಕ್ಕೆ ಏರಿಸುವ ಸಂದರ್ಭ ಇದೀಗ ಬಂದಿದೆ. ಶತಮಾನದ ಹೊಸ್ತಿಲಿನಲ್ಲಿರುವ ಈ ವಿದ್ಯಾಸಂಸ್ಥೆ ಮತ್ತೆ ವಿಜೃಂಭಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

ಎಲ್ಲರಿಗೂ ರಾಜ್ಯೋತ್ಸವದ ಹೃತ್ಫೂರ್ವಕ ಶುಭಾಶಯಗಳು.

– ಸುಧೀಂದ್ರ ಹಾಲ್ದೊಡ್ಡೇರಿ (22 ಸಂಪದದಿಂದ)

Read Online  Download  View All Editions  Feedback/Comments